ನಿವೇದನ
ಡಿವಿಜಿ
ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್ ।
ಕಾಲದಿಂದೆ ಮಾಸದಾ ವಿ
ಚಿತ್ರವೆಸಪನಾರ್
ಗಿರಿಯ ತೊರೆಯ ಬಣದ ಹೊಲದ
ಬೆರಗಿನಿಂದೆ ಮೃಗದ ಖಗದ
ಮೆರೆತದಿಂದಲೀ ವಿಹಾರ
ಭವನವೆಸಪನಾರ್ ।
ಮರೆಯಲಿರ್ದು ಸೊಗವನಿಂತು
ಕವಿಸುತಿರ್ಪನಾರ್
ಜ್ಯೋತಿಗಳನು ಗಗನ ತಲದಿ
ಗೀತಗಳನು ವಿಹಗ ಮುಖದಿ
ಪ್ರೀತಿಗಳನು ಜನರ ಮನದಿ
ತೋರುತ್ತಿರ್ಪನಾರ್ ।
ಮಾತನುಳಿದು ಕವಿತೆಯಿಂತು
ಬೀರುತ್ತಿರ್ಪನಾರ್
ಅವನ ಕೃತಿಯ ನೋಡಿ ಮಣಿವೆ
ವವನ ದನಿಯ ಕೇಳಿ ನಲಿವೆ
ವವನ ಭಿಕ್ಷೆಯುಂಡು ಬೆಳೆವೆ
ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ
ವವನ ಕಾಣೆವು
ರವಿಗೆ ಬೆಳಕ ಭುವಿಗೆ ಬಲವ
ಜವವ ವಾಯುಗೀವ ತೆರದಿ
ಕವಿಯ ವಚನಕವನೆ ಸರಸ
ಭಾವವೀವನು ।
ಅವನೆ ಶಿಲ್ಪ ಚಿತ್ರ ಕೃತಿಗೆ
ಜೀವವೀವನು
ಕಿರಿಯ ಮಕ್ಕಳಳುವ ದನಿಗೆ
ಪಿರಿಯರಿಡುವ ಕಣ್ಣ ಪನಿಗೆ
ಕರಗದೆದೆಯ ಬಿದಿಯು ಬಣಗು
ಕವಿತೆಗೊಲಿವನೇಂ ।
ಮರುಳು ನುಡಿಯಲಿದನು ನಿನ್ನ
ಕಿವಿಯೊಳುಲಿವನೇಂ
ದೈವ ಕೃತಿಯ ಸೊಬಗ ಸರಸ
ಭಾವಿತತಿಯ ಸೊಬಗ ಸುಜನ
ಜೀವ ಕಥೆಯ ಸೊಬಗ ಬರಿಯ
ಕನಸವೆಂಬರೇಂ ।
ಬೇವ ಮನವ ಸೊಬಗಿನೊಂದು
ನೆನಪೆ ತಣಿಸದೇಮ್
No comments:
Post a Comment