Wednesday, April 13, 2016

ಕೂತ ಧ್ವನಿ




"ಹಲೋ . . ." 

ತುಂಬಾ ದಿನ ಕಳೆದ ಮೇಲೆ ಇವತ್ತು ಫೋನ್ ಮಾದಿದ್ದೆ. ಅದ್ಯಾಕೋ ಕಾಣೆ, ಫೋನ್ ಅವರ ಅಣ್ಣ ರಿಸಿವ್ ಮಾಡಿದ್ರು.. 

ಅವರ ಧ್ವನಿಯೇ ಹಾಗೆ. 

ಅಣ್ಣನ ಮಾತು ಭಾರಿ ತೂಕ. ಕೂತ ಸ್ವರ. ಜೀವನದ ಚಕ್ರ ಪೂರ್ತಿ ತಿರುಗಿದ ಅನುಭವ ಮಡುಗಟ್ಟಿದ ಸ್ವಗತ.
ತಮ್ಮನ ಮಾತು ಅತಿ ಸರಳ, ಸಾರಾ ಸಲೀಸು, ಸ್ವಾಭಾವಿಕ, ನಿರ್ಯೋಚಿತ, ವಟ ವಟ - ಗರಿ ಗರಿ.  

ಎಷ್ಟೋ ಕಷ್ಟ ಪಟ್ಟು ಹುಡುಗಿಯನ್ನು ಹುಡುಕಿಕೊಂಡು ಅವಳನ್ನು ಮದುವೆಗೆ ಒಪ್ಪಿಸಿ, ಎರಡೂ ಮನೆಯವರನ್ನು ಒಪ್ಪಿಸಿ, ನೆಂಟರಿಷ್ಟರಿಗೆಲ್ಲ ಒಪ್ಪುವಂತೆ ಮಾಡುವೆಯಾಗಿ, ಸಂಸಾರ ತೂಗಲು ಹಗಲು ರಾತ್ರಿ ದುಡಿದು, ಹತ್ರತ್ರ ಒಂದು ಕೋಟಿ ಸಾಲ ಮಾಡಿ ಹೊಸ ಮನೆ ಕಟ್ಟಿ, ದೈವಕೃಪೆಯಿಂದಾದ ಮಕ್ಕಳನ್ನು ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಿ, ಅತ್ತೆ ಮಾವಗೆ  ಮೆಚ್ಚಿಗೆಯಾಗಿ, ತನ್ನ ಕನಸುಗಳನ್ನು ಗಾಳಿಗೆ ತೂರಿ, ಯಾಂತ್ರಿಕವಾಗಿ ತಿಂಗಳಿಷ್ಟು ಇಎಮ್ಐ ಕಟ್ಟಿ, ಗಾಣದ ಎತ್ತಾಗಿರುವ ಅಣ್ಣನ ಧ್ವನಿ ಕಾಲಕ್ರಮೇಣ ಸ್ವಾಭಾವಿಕವಾಗಿಯೇ ತನ್ನ ಕುಣಿತವೆಲ್ಲ ಮರೆತು - ಕೂತಿದೆ. 

ಜವಾಬ್ದಾರಿಯುತ, ದಪ್ಪ ಸ್ವರದ, ಸುಸ್ತಿನ, ನಿರಾಶೆಯ, ಲವಲವಿಕೆ ಲವಲೇಶವೂ ಇಲ್ಲದ, ಗಂಭೀರದ ದೊಡ್ಡ ಧ್ವನಿ - "ಹಲೋ.." ಎಂದಾಗ ಅಣ್ಣನೇ ಫೋನಲ್ಲಿ ಮಾತಾಡುತ್ತಿರುವುದು ಎಂದು ಖಾತ್ರಿಯಾಯಿತು. 


"ಎಲ್ಲಿ ನಿಮ್ಮ ತಮ್ಮ ಇಲ್ವಾ?" ಎಂದೆ. 

ಆ ಕಡೆಯಿಂದ ಮತ್ತದೇ "ಕೂತ" ಧ್ವನಿ ಅಲುಗಾಡದೆ ಉತ್ತರಿಸಿತು 

"ತಮ್ಮನೇ ಮಾತಾಡ್ತಾ ಇರೋದು, ಯಾಕೆ ನನ್ನ ಅಣ್ಣ ಅಂತ ಅಂದುಕೊಂಡೆಯಾ?"