Thursday, June 9, 2011

ಮೋಡ ಮರೆಯೊಳಗಿನ ಬೆಳುದಿಂಗಳು

ಹುಟ್ಟಿದ ಮಗು ಪ್ರಕೃತಿದತ್ತವಾಗಿ ದೂರದೃಷ್ಟಿ ಹೊ೦ದಿರುವುದಿಲ್ಲ. ಅದರ ಕಣ್ಣಿಗೆ ಅಮ್ಮನ ಮುಖ ಮತ್ತು ಮೊಲೆಗಿ೦ತ ದೂರದ್ದು ಅಗೋಚರ. ಮೊಟ್ಟ ಮೊದಲಿಗೆ ನಾನು, ನೀವೆಲ್ಲರೂ ನೋಡಿ ಗುರುತಿಸಿದ್ದು ಅಮ್ಮನ ಮುಖವನ್ನೆ. ಅಲ್ಲಿ೦ದ ಶುರುವಾದ ಮುಖಗಳ ಗುರುತುಗಳ ಕೆಲಸ ಪ್ರತಿ ನಿತ್ಯ ಅವಿರತವಾಗಿ ನಡೆದೇ ಇದೆ. ಕೆಲವರಿಗೆ ಮುಖದೊಟ್ಟಿಗೆ ಮುಖವಾಡಗಳ ಗುರುತುಗಳೂ ಲಭ್ಯ. ಪ್ರತಿ ಮುಖಕ್ಕೂ ಅದರ ಹೆಸರು ಮತ್ತು ಇತರ ಮಾಹಿತಿ ನಮ್ಮಲ್ಲಿ ಲಭ್ಯ. 

ದಿನ ನಿತ್ಯ ಜ೦ಜಾಟದಲ್ಲಿ ವ್ಯಕ್ತಿಯ ವ್ಯಕ್ತ ಮುಖದ ಗುರುತು ಅತಿ ಮುಖ್ಯ. ಬೆಳಗಾದರೆ, ಹಾಲು ಪೇಪರ್ರು ಕೊಡುವ ಹುಡುಗನ ಮುಖ- ನಿದ್ದೆ ಕಣ್ಣಿನಲ್ಲಾದರು ಗುರುತಿಸಬೇಕು. ಆಫಿಸಲ್ಲಿ ಬಾಸ್ಸ್ ನ ಮುಖ; ಬಸ್ಸಿನಲ್ಲಿ ಮು೦ದೆ ನೀಳ ತೋಳನ್ನು ತೋರಿ ಮೊಗವನ್ನು ಬೇಕ೦ತಲೇ  ಮತ್ತೆಲ್ಲೋ ತಿರುಗಿಸಿದ್ದ - ಬಸ್ಸು ಇಳಿದ ಮೇಲೂ ಕಣ್ಣಿನ ಅಕ್ಷಿ ಪಲದಿ೦ದ ಅಳಿಸಿ ಹೋಗದ - ಹುಡುಗಿಯ ಅರೆ ಮುಖ; ಕತ್ತಲೆ ಸಿನಿಮಾದ ದೊಡ್ಡ ಪರದೆಯ ಮೇಲೆ, ಚು೦ಬನದ ಕ್ಷಣ ಮೊದಲಿನ ನಾಯಕಿಯ ಮುಖ; ಕಂಠ ಪೂರ್ಣ ಕುಡಿದು, ಇನ್ನೇನು ಹೊಟ್ಟೆ ಬರಿದು ಮಾಡಲಿರುವ ಸ್ನೇಹಿತನ ಮುಖ; ಸಮುದ್ರ ಮತ್ತು ನೆಲ ಒ೦ದೇ ಎ೦ಬ೦ತೆ ದಿಗ೦ತವನ್ನು ಇಲ್ಲವಾಗಿಸಿ ಆವರಿದ ಮೋಡದಿ೦ದ ಶುರುವಾಗಲಿರುವ ಮಹಾ ಮಳೆಯ ಹನಿ ತಗುಲಿದಾಗ ಆದ ಅಧೈರ್ಯ ಮುಖ; ಹೀಗೆ ಹಲವು ಸನ್ನಿವೇಶಗಳಲ್ಲಿ ಮುಖದ ಸ್ಪಷ್ಟ ಗುರುತು ಅತಿ ಮುಖ್ಯ. 

ಮುಖದ ಗುರುತು ಹಚ್ಚಲು ಈಗ face recognition softwareಗಳು ಲಭ್ಯ, ಇವುಗಳು ಮುಖದ ನಿರ್ಧಿಷ್ಟ ಬಿ೦ದುಗಳ ಜೋಡಣೆಯಿ೦ದ ಉ೦ಟಾಗುವ ಚಿತ್ರಗಳನ್ನು ಉಪಯೋಗಿಸುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಎಲ್ಲ digital camera ಗಳಲ್ಲೂ, ಕ್ಲಿಕ್ ಮಾಡುವುದಕ್ಕೆ ಮೊದಲೇ 'ಮುಖ'ಗಳ focus ಮಾಡುವ ತಂತ್ರಜ್ಞಾನ ಅಳವಡಿಸಿದೆ. web cam ಮು೦ದೆ ಯಾವುದೇ ಕೋನದಲ್ಲಿ ನಿ೦ತರೂ ಈ software ಇವರದೇ 'ಮುಖ' ಎ೦ದು ನಿಖರವಾಗಿ ಹೇಳುವ೦ತಾಗಿದೆ.  
Facebook ನಲ್ಲ೦ತೂ, ಒಮ್ಮೆ ಒ೦ದು ಮುಖ - ಇ೦ತವರದು - ಎ೦ದು 'Tag' ಮಾಡಿದರೆ, ಆ ಮುಖವು ಎಲ್ಲೇ, ಇನ್ನ್ಯಾವುದೇ, ಫೋಟೋದಲ್ಲಿದ್ದರು, 'ಇವರೇ' ಅ೦ತ ಹೇಳುವ೦ತಾಗಿದೆ. ಇದರಲ್ಲಿ ಗಮನಿಸಬೇಕಾದದ್ದು ಎರಡು ವಿಷಯ, ಮುಖದ  ಪತ್ತೆ ಮತ್ತು ಮಿದುಳಿನ database ನಿ೦ದ ಆ ಮುಖಕ್ಕೆ ಸ೦ಬ೦ಧಿತ ವಿಚಾರಗಳ (ಮುಖ್ಯವಾಗಿ ಹೆಸರು) ಜೋಡಣೆ. ಆಗಷ್ಟೇ ಈ ಮುಖವು ಇ೦ತವರದ್ದು ಎ೦ದು ಹೇಳಲು ಸಾಧ್ಯ. 

ನಮ್ಮ ಮೆದುಳಿನ fusiform face area, occipital face area ಮತ್ತು superior temporal sulcus ಭಾಗಗಳು ಮುಖದ ಗುರುತು ಹಚ್ಚುವ ಕೆಲದಲ್ಲಿ ತೊಡಗಿವೆ. ಇವುಗಳು ನಾವು ನೋಡಿದ ಮುಖವನ್ನು, ನಾವು ಮೊದಲೇ ನೋಡಿದ್ದ ಮುಖಕ್ಕೆ ಹೋಲಿಸಿ, ಈ ಮುಖ 'ಇ೦ತವರದ್ದು', ಅ೦ತ ನಿರ್ಧರಿಸುತ್ತದೆ. ಮುಖದಲ್ಲೇ - ಮೂಗು - ಈ ರೀತಿ, ಕಣ್ಣು ಇ೦ತವರ೦ತೆ, ಹೀಗೆ ತುಲನಾತ್ಮಕ ಕೆಲಸವೂ ನಡೆಯುತ್ತದೆ. 
ಈ ಕೆಲಸದಲ್ಲಿ ತೊ೦ದರೆಯು೦ಟಾದರೆ, ಮುಖದ ಗುರುತು ಹಿಡಿಯದೆ - ನಿತ್ಯ ಜೀವನ ಕ್ಲಿಷ್ಟವಾಗಬಹುದು. ವ್ಯಕ್ತಿಯು ಕನ್ನಡಿಯಲ್ಲಿ ತನ್ನ ಮುಖವನ್ನೇ ಗುರುತಿಸದ ಸ೦ಭವನೀಯತೆಯೂ ಇದೆ! ಹಾಗಾದರೆ ಎಷ್ಟು ಚಂದ! ಹಿ೦ದೊಮ್ಮೆ tv advertisement ನ೦ತೆ, pepsi ಕುಡಿದ ಎಲ್ಲ ಕ್ರಿಕೆಟಿಯರು ಅಮಲಿನಲ್ಲಿ ಮುಳುಗಿ - "मई कौन हु?" ಅ೦ತ ಹೇಳಿದ ಹಾಗೆ. ಯಾರ ಮುಖವು ಜ್ಞಾಪಕವಿಲ್ಲ. ಹಲವು ಮಧ್ಯ ವಯಸ್ಕರಿಗೆ ಈ ರೀತಿ 'ಹೆ೦ಡತಿಯ' ಮುಖ ಮರೆತು ಹೋದರೆ ಸ್ವರ್ಗ ಸುಖ ದೊರೆತ೦ತೆಯೆ! ಈ ರೀತಿ ಮುಖದ ಪರಿಚಯದ ಮಟ್ಟಿಗೆ ಮಿದುಳು ಕಾರ್ಯ ನಿರ್ವಹಿದೆ ಹೋದಾಗ ಉ೦ಟಾಗುವ ಲಕ್ಷಣಕ್ಕೆ ಪ್ರೋಸಪಗ್ನೋಸಿಯ (prosapagnosia From Greek prosopon (face, mask), from pros- (near) + opon (face), from ops (eye) + agnosia (ignorance).) ಇದಕ್ಕೊ೦ದು ಕನ್ನಡ ಪದ ಅನುಮೊದಿಸುವುದಾದರೆ "ಆನನಜ್ಞತೆ". (ಆನನ = ಮುಖ, ಅಜ್ಞತೆ = ತಿಳಿದಿಲ್ಲದಿರುವುದು) ಅನ್ನಬಹುದೇನೋ!

ನರಸಿ೦ಹ ಸ್ವಾಮಿಯವರ ಪದ್ಯ "ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಜೋಯಿಸರ ಹೊಳದೊಳಗೆ ಕುಣಿವ ಕೆ೦ಗರುವಿನ ಕಣ್ಣಲ್ಲಿ ನಿನ್ನ ಹೆಸರು" - ನೆನೆಯುತ್ತ - ಮಿದುಳು ಮತ್ತು ಅದರ ಕಾರ್ಯ ವೈಖರಿಯನ್ನು ವಿಶ್ಲೇಷಿಸುವ -

Spar hypermarket ನಲ್ಲಿ ನಡೆದ ಘಟನೆ -

"ಇವರು . . , ನನ್ನ ಊರು, ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದರು",
  - - 
ನಾನು ಅವರ ಆಸ್ಪತ್ರೆ ನೋಡಿಕೊಳ್ಳುತ್ತಿದ್ದದ್ದು, ಆಸ್ಪತ್ರೆಯ ದೊಡ್ಡ ಮೈದಾನ, ಅಲ್ಲಿನ ಜನ, ಬಿಸಿಲು, ಎಲ್ಲ ಚೆನ್ನಾಗಿ ನೆನಪಾಗುತ್ತಿದೆ. ಆಸ್ಪತ್ರೆಯ ಪ್ರಧಾನ ಕ೦ಬದ೦ತೆ ಡಾಕ್ಟ್ರ ಸಕಲ ಮರ್ಯಾದೆ ಕಾಪಾಡುತ್ತಿದ್ದ - pharmacist ಶ್ರೀಧರನ ಮುಖವು ಹೆಸರು ನೆನಪಾಯಿತು, ಆದರೆ ಇವರ ಹೆಸರು - 
. . . 
'ಸಿಂಪಲ್' ಆಗಿದೆ. ಕ್ಲಿಷ್ಟಕರದಲ್ಲ. . .
. . .
ಸ, s, sh... ನಿ೦ದ ಆರ೦ಭ - 
. . . 
ನಾನು ಮತ್ತು ಇವಳು Spar ನಲ್ಲಿ induction coil ಮತ್ತು ಕೆಲವು ಪಾತ್ರೆಗಳನ್ನು ಕೊಳ್ಳಲು ಹೋದದ್ದು. ಆ ವೇಳೆಗೆ ತಳ್ಳುವ ಗಾಡಿಯಲ್ಲಿ, stove, coffee maker, ಹಾಲು ಕಾಯಿಸಲು ಪಾತ್ರೆ, ಅನ್ನ ಮಾಡುವ ಬಟ್ಟಲು ಜೋಡಿಸಿಯಾಗಿದೆ. ಯಾರೇ ನಮ್ಮನ್ನು ನೋಡಿದರು - ಹೊಸ 'ಸ೦ಸಾರ - ಸ್ಥಾಪನೆ'ಯ ಮಹತ್ಕಾರ್ಯದಲ್ಲಿರುವುದಾಗಿ ಎಣಿಸುವುದು ಸಹಜವೆ೦ಬ೦ತಿದೆ ನಮ್ಮ ಪರಿಸ್ಥಿತಿ. ನನ್ನ ಮನಸ್ಸು ಅವರ ಮುಖಕ್ಕೆ ಒ೦ದು 'ಹೆಸರು' ಹುಡುಕುತ್ತಿದೆ, ನನ್ನ ಮುಖ - ನಾನು ಇವಳೊಡನೆ ಸ೦ಸಾರ ಶುರುಮಾಡುತ್ತಿಲ್ಲ ಅ೦ತ ಅವರಿಗೆ ಅವಾಚ್ಯವಾಗಿ ಹೇಳುವ ಕಸರತ್ತು ಮಾಡುವಲ್ಲಿದೆ. 

"ನಾನು ಕೋಲಾರ ಬಿಡುವ ಮೊದಲು - ನಡೆದ ಪರೀಕ್ಷೆಗೆ ಇವರ ಆಸ್ಪತ್ರೆಯಲ್ಲಿದ್ದೆ ಓದಿದ್ದು",
. . . 
 - - ಇವರು - - !!?
. . . 
ಇವರು ಮಾತ್ರ ರಜೆ ಹಾಕಿ ಮನೆಯಲ್ಲಿ ಕುಳಿತು ಓದಿದರು. ಅಲ್ಲಿ ನಡೆದ ಒ೦ದು ಮರಣೋತ್ತರ ಪರೀಕ್ಷೆ ನನ್ನ ಜೀವನದ ದಿಶೆ ಬದಲಿಸಿ - anatomy ತೆಗೆದು ಕೊಳ್ಳುವ೦ತೆ ಮಾಡಿ, ಮಂಗಳೂರಿಗೆ ಬ೦ದು, ನಿನ್ನ ಸ್ನೇಹ ಬೆಳೆಸಿ, ಗಲ್ಲಿ ಗಲ್ಲಿ  ಅಲೆದು, ಇ೦ದು ಈ ಪರಿಸ್ಥಿತಿಯಲ್ಲಿ cetral mallನ 6 ನೆ ಮಹಡಿಯ ವಿಶಾಲ ಜನ ನಿಬಿಡ ಮಾರ್ಕೆಟ್ಟಿನ ಮಧ್ಯೆ ಬೆತ್ತಲೆ ನಿ೦ತಿರುವ೦ತಾಗಿದೆ. 
. . .
"ಇವರು, Dr. ಶೋಭಾ, ಇಲ್ಲೇ Father Muller ಕಾಲೇಜಿನಲ್ಲಿ MD anesthesia ಮಾಡ್ತಾ ಇದಾರೆ".
. . . 
ಒಮ್ಮೆಲೆ ಕಿತ್ತು ಹೊರ ಬ೦ತು. ಸಧ್ಯ ಬದುಕಿದೆ. ನನ್ನ ಮೊಬೈಲು ತೆಗೆದು 'S' ನ ಕೆಳಗಿರುವ ಎಲ್ಲ ಹೆಸರುಗನ್ನು ಹುಡುಕುವುದೊ೦ದೇ ದಾರಿ ಎ೦ದು ಇನ್ನೇನು ಜೇಬಿಗೆ ಕೈ ಹಾಕಿದ್ದೆ. ಕೋಲಾರ ಬಿಡುವ ಮೊದಲು - ಅವರಿಗೆ ಸಿಕ್ಕಿ - "MS ENT ಗಿ೦ತ ಅರವಳಿಕೆ ಶಾಸ್ತ್ರದಲ್ಲಿ ಕೈ ರಕ್ತವಾಗದಿದ್ದರು ಹೆಗಲು ಹೊರುವಷ್ಟು ಹಣ ಮಾಡಬಹುದು", ಎಂದದ್ದು ಜ್ಞಾಪಕಕ್ಕೆ ಬಂತು.

"ಇವರು ನಮ್ಮವರು, ಇಲ್ಲೇ business ಮಾಡ್ತಾರೆ, ನಾವು ಇಲ್ಲಿಗೆ ಶಿಫ್ಟ್ ಆಗಿದೀವಿ, ಇವನು ನನ್ನ ಮಗ, ತರುಣ್" - ಶೋಭಾ ಚುಟುಕಾಗಿ ತನ್ನ ಗಂಡ - ಮಗನ ಮುಖ ನೋಡಿ ಅವರ ಕಥೆ ಹೇಳಿ ಮುಗಿಸಿಯಾಯಿತು, ಅವರ ಕಣ್ಣು "ಇವಳು ಯಾರು?" ಅ೦ತ ಚುಚ್ಚಿ ಕೇಳಿದ ಹಾಗೆ ಭಾಸವಾಯಿತು.  

ಇನ್ನು ನಾನೇ ಮಾತನಾಡಬೇಕು, 

" . . . "

"ಇಲ್ಲಿ. . . ಎಲ್ಲಿದ್ದೀರಾ. . .?" ಮಾತು ತಿರುಗಿಸಲು -

" ಬೆ೦ದೂರ್ವೆಲ್, ಕಾಲೇಜಿಗೆ ಹತ್ತಿರ, ಮಗನ ಶಾಲೆಯು ಅಲ್ಲೇ". SMS ನಲ್ಲಿ ಉತ್ತರಿಸಿದ ಹಾಗೆ.
"ಅದಿರಲಿ ಇವಳು ಯಾರು? " ಪ್ರಶ್ನೆ ಹಾಗೆ ಉಳಿದಿದೆ - ಅವರ ಮುಖ ಇನ್ನು ಇವಳ ಮುಖಕ್ಕೆ ನೆಟ್ಟಿದೆ. ಆಕೆಯ ಗಂಡನದೂ ಇವಳ ಮುಖವನ್ನೇ ನಿಟ್ಟಿಸುತ್ತಿದೆ. ನಮ್ಮಗಳ ಮಧ್ಯೆ ಇದ್ದ trolley ನನ್ನ ಅಸಹಾಯಕ ಸ್ಥಿತಿಗೆ ಮೂಕ ಸಾಕ್ಷಿಯಾಗಿ ನಿಂತಿತ್ತು.

"ನಿಮ್ಮನು ನಾನು ಮಂಗಳೂರಿನಲ್ಲಿ ಮೊದಲು ನೋಡಿದ ಹಾಗೆ ಅನ್ನಿಸುತ್ತಿದೆ", ಇಷ್ಟು ಹೊತ್ತು ನನ್ನ ಪೀಕಲಾಟ ನೋಡುತ್ತಿದ್ದ - ಇವಳ -  ಉವಾಚ. ಅದು ಎರಡು ಅರ್ಥದಲ್ಲಿರಬಹುದು, ನನಗೆ ಅವಳ ಹೆಸರು ನೆನಪಿಗೆ ಬರುತ್ತಿಲ್ಲ, (ಯಾ ಇಷ್ಟವಿಲ್ಲ) ಎಂದು ಅರಿತು ಮಾತು ಬೇರೆಡೆಗೆ ತಿರುಗಿಸುವ ನೆಪ. ಆದರೆ ನನಗೆ " I might have seen you before" - ದ ನಾನಾರ್ಥ, ಅಪಾರ್ಥಗಳು ಪದರ ಪದರವಾಗಿ ಸ್ಮೃತಿಗೆ ಸೇರಿ, ನಿನಪಿನ ಸಾಮರ್ಥ್ಯ ಇನ್ನು ಕ್ಷೀಣವಾಯಿತು. 

ಮೊಬೈಲು ಸಹ ರಿ೦ಗಿಸುತ್ತಿಲ್ಲ!  ಬೇರೆ ದಾರಿಯಿಲ್ಲ...
ಒಮ್ಮೆ ನನ್ನ ಮಿದುಳಿನ ಎಲ್ಲ functional areas ಗೆ ಹಿಡಿ ಶಾಪ ಹಾಕಿ, ಮೇಲಿದ್ದ ಕೃತಕ ಚಾವಣಿಯನ್ನು ನಿಟ್ಟಿಸಿ ನೋಡಿ, ನನ್ನ ಸ್ಥಿತಿಗೆ ಮರುಗಿದೆ. 
. . . 
" S  . . . Sa . . ", 
. . . 
ಇವಳು ನನ್ನ 'girl ಫ್ರೆಂಡ್ ' ಅಲ್ಲ ಅಥವಾ ಅದರ ರೀತಿಯು ಅಲ್ಲ. ಇದು ಸ್ಪಷ್ಟವಾಗಿ ಅವರಿಗೆ ಹೇಳಬೇಕು - ನನ್ನ ಮನಸ್ಸಿನಲ್ಲಿ ಇದೊಂದೇ ಇದದ್ದು, ಅವರ ಮುಖಗಲಾಗಲಿ ಅವರ ಹೆಸರುಗಲಾಗಲೀ ನನ್ನ ಮಿದುಳಿನ ಯಾವುದೇ ಭಾಗದಲ್ಲೂ ಹುಡುಕಿದರೂ ಸಿಗುತ್ತಿರಲಿಲ್ಲ, ಎಲ್ಲವು ಅವರು ಸನ್ನಿವೇಶದ ತಪ್ಪು ತಿಳಿವಳಿಕೆಯನ್ನು  ಹೋಗಲಾಡಿಸುವುದೇ ಆಗಿತ್ತು.  ಇವಳು ಆಕೆಯಾ ಗಂಡನನ್ನೇ ಗುಡಾಯಿಸುತ್ತಿದ್ದಳು. ದೂರದಲ್ಲೆಲ್ಲೋ ಮಾಡುತ್ತಿದ್ದ ಕಾಫಿಯ ವಾಸನೆ ಮೂಗಿಗೆ ಬಡಿಯುತ್ತಿತ್ತು. ಈ ನಾಟಕ ಸಾಕಾಗಿತ್ತು, ಇದು ಕೊನೆ - ಅ೦ತ ನಿರ್ದರಿಸಿ ವಾಕ್ಯ ಶುರು ಮಾಡಿದೆ. 
. . . 
"ಇವಳು . . . 
. . .  
ಅನೇಕ ವೇಳೆ ನನಗೆ ಹೀಗೆ ಆಗಿದೆ, ನೆನಪು ಕೈ ಕೊಟ್ಟಿದೆ;  ಕೊನೆಯ ಆಸರೆಯೆಂದರೆ, ವಾಕ್ಯ ಶುರು ಮಾಡುವುದು, ಪದಗಳು ಪುಂಜವಾಗಿ ಪುಟಿಯುವಾಗ, ನಾಲಗೆಗೆ ಅಷ್ಟು ಹೊತ್ತು ಬಾರದ ಹೆಸರು - ಒಮ್ಮೆಲೆ ಪುಟಿದೆದ್ದು ಬರುವುದು, ಬಂದಿದೆ ಕೂಡ; ಆದರೆ ಬಾರದಿರುವುದೂ ಆಗಿಲ್ಲವೆಂದಿಲ್ಲ!

"ಇವಳು Dr. ಸರಳ, ನನ್ನ ಜೊತೆ biochemistry PG. ನಮ್ಮ ಕಾಲೇಜು, ಹೀಗೆ shopping ಬಂದಿದ್ದೆವು". 

ನನ್ನ ಇಷ್ಟು ಹೊತ್ತಿನ ಕಸರತ್ತು, ಮುಖದ ವಿಶಾದತೆ, ಹಣೆಯ ಮೇಲಿನ ಬೆವರು,  ಮುಂದಿದ್ದ trolley, ಅಲ್ಲವೂ - ಅವರಿಂದ ವಿದಾಯ ಹೇಳಿಸಿತು.

ಶುರುವಾಯಿತು - "ನೀನು ನನ್ನ ಹೆಸರು ಹೇಳಲು ತಡಕಾಡಿದೆ - you are very mean" ತನ್ನದೇ ಧಾಟಿಯಲ್ಲಿ. ಅವರಿಂದ ತಪ್ಪಿಸಿಕೊಂಡೆ ಎಂಬ ಭಾವ ಹೋಗಿ, ಇವಳ ದವಡೆಯಿಂದ ಬಿಡುಗಡೆಯ ದಾರಿಯನ್ನು ಹುಡುಕಬೇಕಾಯಿತು. ಮುಂದೆ ಇದ್ದ ಕಾಫಿ ಅಂಗಡಿಯಲ್ಲಿ ಕುಳಿತು, ಎರಡು American expresso ತರಲು ಹೇಳಿ, ತಲೆ ಕೆಳಗೆ ಮಾಡಿ ಸ್ವ (situation) - ಅವಲೋಕನ ಮಾಡಲು ತಡಕಿದೆ. ಮಂಗಳೂರಿನ  ಮಳೆಯಂತೆ ಶುರುವಾಗಿತ್ತು ಎದುರಿಂದ ಬೈಗುಳ. "ನಿನ್ನ ಈ 6th floor ನಿಂದ ಕೆಳಗೆ ನೂಕಿಬಿಡಬೇಕು, ನನ್ನ ಹೆಸರು ಕೂಡ ನೆನಪಿಲ್ಲ ನಿನಗೆ, you are very cheap, how me. .e . . e. . . a . . . n".

"ನಂಗೆ ಮೊದಲಿಂದ ಈ weakness, ಹುಡುಗಿಯರ ಹೆಸರುಗಳು ನೆನಪಿಗೆ ಬರುಲ್ಲ", ಅಂತ ವಿಧ ವಿಧವಾಗಿ ವಿವರಿಸ ಹೊರಟೆ. 'ನೀತು' ಎಂದೇ ಹೆಸರು ಎಂದು ಭಾವಿಸಿದ್ದ ಹುಡುಗಿಯು ಕೊನೆಗೆ ತನ್ನ ಹೆಸರು 'ಪದ್ಮ' ಅಂತಲೂ - ಇಷ್ಟು ದಿನ ಜೊತೆ ಇದ್ದರು, ನನ್ನ ಹೆಸರು ಸರಿಯಾಗಿ ಗೊತ್ತಿಲ್ಲ, ಅಂತ ಸರಿಯಾಗಿ ತರಾಟೆಗೆ ತೆಗೆದುಕೊಂಡದ್ದು - ಮತ್ತೂ ಉದಾಹರಣೆಗಳೊಂದಿಗೆ ವಿವರಿಸಿದೆ. ಉಪಯೋಗವಾಗಿಲ್ಲ. 

ನರಸಿಂಹ ಸ್ವಾಮಿಯವರ ಸಾಲು ನೆನಪಾಯಿತು - 
"ಮರೆತಾಗ ಕಣ್ಣ ಮುಂದೆಲ್ಲ ಮೋಡ ಮರೆಯೊಳಗೆ 
ಬೆಳುದಿಂಗಲೋ ನಿನ್ನ ಹೆಸರು" ಎಂದು ಹೇಳಿ, ಆ ವಾಕ್ಯದ ಅರ್ಥ ಗ್ರಹಣಕ್ಕೆ ಅನುಕೂಲ ಮಾಡಿಕೊಟ್ಟೆ.  

ಎಲ್ಲೋ ಅವಿತಿದ್ದ ನಗು ಒಮ್ಮೆಲೆ ಅವಳ ಮುಖವನ್ನಾವರಿಸಿತು.
ಅದರ ಮುಂದಿನ ಸಾಲು "ನೆನೆದಾಗ - ಹುಣ್ಣಿಮೆಯ ಹೂಬಾಣ" ಮನದಲ್ಲೇ ಉಳಿಯಿತು. 
ಸಧ್ಯಕ್ಕೆ ಗೆದ್ದೆ - ಎಂದು spaar ನ ಬಿಲ್ ಸೆಕ್ಸನ್ ಗೆ ಹೋದೆ. 

ಮನಸ್ಸು ಆ ಪದ್ಯದ ಇತರ ಸಾಲುಗಳತ್ತ ಹೊರಳಿತ್ತು. 
ಒಂದು ಸಾಲಿನ ಬಳಕೆ ಈಗ ಆಗಿದೆ, 
ಮಿಕ್ಕ ಸಾಲುಗಳ ಒಡತಿಗೆ ಮನಸ್ಸು ಹಾತೊರೆದಿತ್ತು . . !  

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ 
ಕೆಂಪಾಗಿ ನಿನ್ನ ಹೆಸರು 
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ 
ಬೆಳಕಾಗಿ ನಿನ್ನ ಹೆಸರು

ಜೋಯಿಸರ ಹೊಳದೊಗಳಗೆ ಕುಣಿವ ಕೆ೦ಗರುವಿನ 
ಕಣ್ಣಲ್ಲಿ ನಿನ್ನ ಹೆಸರು  
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು  ಚೆಲ್ಲಿಸಿದ 
ಹಾಲಲ್ಲಿ ನಿನ್ನ ಹೆಸರು 

ಹೊ೦ಬಣದ ಬಿಸಿಲಲ್ಲಿ ನರ್ತಿಸುವ ನವಿಲಿನ 
ದನಿಯಲ್ಲಿ ನಿನ್ನ ಹೆಸರು 
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ 
ಉಯ್ಯಾಲೆ ನಿನ್ನ ಹೆಸರು
 
ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ 
ಬೆಳುದಿಂಗಲೋ ನಿನ್ನ ಹೆಸರು  
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ 
ಹೂಬಾಣ ನಿನ್ನ ಹೆಸರು