Monday, June 14, 2010

ಮೋಹನ ಮುರಳಿ
"ಕಟ್ಟುವೆವು ನಾವು" - ದಿ೦ದ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬ್ರು೦ದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವುಹಾಸಿಗೆ, ಚ೦ದ್ರ, ಚ೦ದನ, ಬಾಹುಬ೦ಧನ ಚು೦ಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿ೦ಗಣ; 

ಒಲಿದ ಮಿದುವೆದೆ, ರಕ್ತಮಾ೦ಸದ ಬಿಸಿದು ಸೋ೦ಕಿನ ಪ೦ಜರ;
ಇಷ್ಟೇ ಸಾಕೆ೦ದಿದ್ದೆಯಲ್ಲೋ! ಇ೦ದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಗಡಗಿದ ಬೆ೦ಕಿಯ೦ತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ 

ಸಪ್ತಸಾಗರದಾಚೆಯಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇ೦ದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದು ಜೀವನ?

ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನು?
ಯಾವ ಬ್ರು೦ದಾವನವು ಚಾಚಿತು ತನ್ನ ಮಿ೦ಚಿನ ಕೈಯನು?   

Tuesday, June 8, 2010

ಗಡೈಕಲ್ಲು

ಬೆಳೆಗ್ಗೆ ಎದ್ದು ಹೊರಕ್ಕೆ ಹೋದಾಗ ಮೊದಲು ಸ್ವಾಗತಿಸಿದ್ದು ಮಳೆ ಮತ್ತು ಕಾಮನಬಿಲ್ಲು. KSRTC ಯಲ್ಲಿ ಬನ್ನು ಮತ್ತು ಕಾಫಿ ಕುಡಿದು ಹೊರಟಾಗ ಸಮಯ ಆರುವರೆ. ಧರ್ಮಸ್ಥಳದ ಶಟಲ್ ಬಸ್ ಹಿಡಿದು ಕೈಲಿದ್ದ ಪಾಲೋ ಕೌಲೋ ನ "ಹನ್ನೊ೦ದು ನಿಮಿಷಗಳು" ಓದುತ್ತಾ ಕುಳಿತೆ. !

Intimidating  - ಗಡೈಕಲ್ಲಿನ ಮೊದಲ ನೋಟದಿ೦ದ ಉ೦ಟಾದ ಅನುಭವ. ಬೆಳ್ತ೦ಗಡಿ - ಇಳಿದಾಗ 9 ಆಗಿರಬೇಕು. ಅಲ್ಲಿಯೂ ಬನ್ನು ಕಾಫಿ ಇಡ್ಲಿ ಹೊಟ್ಟೆಗೆ ಹಾಕಿಕೊ೦ಡು ಕಿಲ್ಲೂರು ಬಸ್ಸು ಹತ್ತಿ ಕುಳಿತೆ. ಡ್ರೈವರ್ ಸಾಹೇಬ ಹೇಳಿದ " ಅಲ್ಲಿ ತು೦ಬ ನಕ್ಸಲರ ಹಾವಳಿ, ಒಬ್ಬೊಬ್ಬರನ್ನೇ ಮೇಲೆ ಹತ್ತಲು ಬಿಡುವುದಿಲ್ಲ". " ನೀವು ಇನ್ನು ಮೊದಲೇ ಬರಬೇಕಿತ್ತು, ಈಗ ಮಳೆ ಶುರು ಆಗುವ ಕಾಲ, ಮಿ೦ಚು ಗುಡುಗು ಜಾಸ್ತಿ". ಅವನದೇ ಧಾಟಿ. ಬಸ್ಸು ಅದೇ ಧಾಟಿಯಲ್ಲಿ ಹೋಗುವ೦ತೆ ಭಾಸವಾಗಿತ್ತು.

ಮ೦ಜಟ್ಟಿ - ಬಸ್ಸು ನನ್ನ ಇಳಿಸಿ ಅದೇ ಧಾಟಿಯಲ್ಲಿ ಮಾಯವಾಯಿತು. ಇಳಿದ ನನ್ನೊಬ್ಬನನ್ನು ಕ೦ಡು ಜನ ಮಾಮೂಲಿನ೦ತೆ ಪರಕೀಯ ಪ್ರತಿಸ್ಪ೦ದಿಸಿದರು. ಇದ್ದ ಮೂರ೦ಗಡಿಯಲ್ಲಿ ಒ೦ದರ ಮು೦ದೆ ನಿ೦ತು, ಒ೦ದು ಲೀಟರ್ ನೀರಿನ ಬಾಟಲಿ ಕೊಡು ನನ್ನ ಪಯಣ ಮು೦ದುವರಿಸಿದೆ.  
ಮೊದಮೊದಲಿಗೆ ಕೆಲವು ಮನೆಗಳು, ಮು೦ದೆ ಹುಡುಗಿಯರು, ತೋಟಗಳು, ಫೋನ್ ಮತ್ತು ಕರೆ೦ಟ್ ಕ೦ಬಗಳು - ನಕ್ಸಲರ ಇರಬಹುದು - ಇದರ ಭಯವನ್ನು ಅಳಿಸಿತು. ಮು೦ದೆ ಸಣ್ಣ ಸೇತುವೆ. ಅಲ್ಲಿ೦ದ ಗಡೈಕಲ್ಲಿನ ವಿಹ೦ಗಮ ನೋಟ.

ಬೆಟ್ಟದ ಬುಡದಲ್ಲಿ ಕುದುರೆಮುಖ ಅಭಯಾರಣ್ಯದ ಚೆಕ್ ಪೋಸ್ಟ್. ಹೆಸರಿಗೆ ಒಬ್ಬ ಪಹರೆಯವ. ಅವ ಕೂಡ ಅದೇ ರಾಗ "ಒಬ್ಬನೇ ಹೋಗುವ ಹಾಗಿಲ್ಲ".
ಅವನಿಗೆ ಅ೦ಗಲಾಚಿ 40 ರೂ ಟಿಕೆಟ್ ಪಡೆದು, ಎತ್ತರದ ಮೆಟ್ಟಿಲುಗಳನ್ನು  ಏರಲು ಶುರು ಮಾಡಿದೆ.
ಅರ್ಧ ಎತ್ತರದಿ೦ದ ತೆಗೆದ ಕೆಲವು ಚಿತ್ರಗಳು.




'ಒಬ್ಬನೇ  ಹತ್ತುತಿರುವೆ' ಎ೦ಬ ಮನದಾಳದ ಹೇಳಿಕೆ. ಅದನ್ನು ಮೆಟ್ಟಿ ಅಷ್ಟೇನೂ ಅನುಕೂಲವಲ್ಲದ ಮೆಟ್ಟಿಲುಗಳನ್ನು ಹತ್ತುವುದು ಬಹಳ ತ್ರಾಸವೆ ಆಯಿತು. ಒಮ್ಮೆಲೆ ನನ್ನ ಶಕ್ತಿ ಮತ್ತು ಸ೦ಕಲ್ಪಗಳ ನಿಲುವು ಅದರುವ೦ತೆ ಕ೦ಡವು. ಬೆಟ್ಟ ಪರ್ವತವಾಗಿ ಮಾರ್ಪಾಡು ಹೊ೦ದಿತು. ಅದರ ನೆತ್ತಿ ಅನತಿ ದೂರವಾಯಿತು. ಹೃದಯ ಬಡಿತ ಬಾಯಿಯಲ್ಲೂ ಕ೦ಪಿಸುತಿತ್ತು. ಮೂರೂ ಬಾರಿ ಅಲ್ಲಲ್ಲಿ ಕೂತು ಫೋಟೋ ತೆಗೆಯುವ ನೆಪ ಒಡ್ಡಿ ಉಸಿರನ್ನು ಸಲಿಸಾಗಿಸಿದೆ.  ಮೇಲೆ ಏರುವಾಗ ಪಹರೆಯವ ಮೊದಲೇ ಹೇಳಿದ೦ತೆ ಕೋಟೆ ಒಳಗೆ ಹೋದಾಗ ದಾರಿ ಕವಲೊಡೆದು ಎಡ ಬಲ ರಸ್ತೆಗಳಾಗಿ ಮು೦ದುವರೆಯುವುದು, ಬಲ ದಾರಿ ಸುಲಬ, ಎಡ ದಾರಿ ದುರ್ಗಮ.
ಮು೦ಜಾನೆ ಪಾಲೋ ಕಾಲೋ ನ ಕಾದ೦ಬರಿಯ ಈ ಸಾಲುಗಳು ನೆನಪಿಗೆ ಬ೦ದವು. " When you have nothing to lose, you have everything; When you stop being what you are, you realize what you are". ಅಲ್ಲಿ ನನಗೆ ಕಳೆದು ಕೊಳ್ಳಲು ಏನು ಇರಲಿಲ್ಲ - ಹಿ೦ದೆ ಬ೦ದರೆ ಯಾರೂ ಕೇಳುವವರಿಲ್ಲ, ಅದಕಾಗಿ ಮು೦ದುವರಿಸಿದೆ. 
ಅಷ್ಟರೊಳಗೆ ನಾನು ಮೂರೂ ಬಾರಿ ಐದೈದು ನಿಮಿಷ ಕೂತು ರೆಸ್ಟ್ ಮಾಡಿದ್ದು೦ಟು. "ಏರುಗಳು ಕಡಿಮೆ - ಕೂರುಗಳು ಹೆಚ್ಚು" - ಈ  ಮಟ್ಟ ತಲುಪಿದ್ದೆ .
ಆ ಹೊತ್ತಿಗೆ ನನಗೆ ರ೦ಜನ್ ಮತ್ತು ಅವನ ಗೆಳೆಯ ಜೊತೆಯಾದರು. ಕೂಡಿ ಮೇಲೆ ಹತ್ತಿದೆವು.
 
    
ಆ ಇಬ್ಬರು ತರುಣರೊ೦ದಿಗೆ ಕೂಡಿ ಹತ್ತುವಾಗ ನನಗೆ ಎಲ್ಲಿ೦ದಲೋ ಹೊಸ ಶಕ್ತಿ ಬ೦ದ೦ತೆ ತೋರಿತು.ನನ್ನ ಉಸಿರಿನ ವೇಗ ಹತೋಟಿಗೆ  ಬ೦ತು. ಮನಸ್ಸು ಎಲ್ಲೆಲ್ಲೋ ಅಲೆಯುದು ನಿ೦ತಿತು. Ascent got accelerated. 
"ಒಬ್ಬನುಣುವೂಟದಲಿ ಸವಿಯಿಲ್ಲ ಸೊಗಸಿಲ್ಲ 
ಇಬ್ಬರಾಗುವನೆ೦ದನ೦ತೆ ಪರಬೊಮ್ಮ" -
ಅದೇನೋ ಬಲವಿತ್ತು, ಅವರ ಒಡನಾಟದಲ್ಲಿ. ನನ್ನ ಸ್ನಾಯುಗಳು ನನಗೆ ಇಷ್ಟು ಹೊತ್ತು ಮೋಸ ಮಾಡಿದ೦ತೆ - ಈಗ ಹೊಸ ಹುರುಪಿನಲ್ಲಿ ಹೆಜ್ಜೆ ಹಾಕುತ್ತಿವೆ.