Showing posts with label Short story. Show all posts
Showing posts with label Short story. Show all posts

Wednesday, December 21, 2011

ಕತ್ತಲಲ್ಲಿ - pretty woman

ಹಲವು ದಿನಗಳಿಂದ ಬರೆಯಲು ಯತ್ನಿಸುತ್ತಿರುವೆ.

ಹಾ. title ನೋಡಿ ಗಾಬರಿ ಬೇಡ. ಹುಡುಗಿಯರು ಕತ್ತಲೆಯಲ್ಲಿಯೇ ಚೆಂದ - ಬೆಳಕಿನಲ್ಲಿ ನಿಜ ಬಣ್ಣ ಬಯಲಾಗುತ್ತೆ ಅಂತೀರ?  'ಆಜ್ ಕಿ ರಾತ್ ಹೋನಾ ಹಾಯ್ ಕ್ಯಾ? ' ಅಂತ 'ಡಾನ್"ನಲ್ಲಿ ಕೇಳಿದ್ದರೂ, "ವೈಟಿಂಗ್ ಫಾರ್ ಟು ನೈಟ್" ಜೆನಿಫೆರ್ ಹಾಡಿದ್ದರೂ, amature ನಾನು - ದಿನದ ಬೆಳಕಿನಲ್ಲೇ ಅಂದವನ್ನು ಮೆಚ್ಚುವವ.
1990 ಯಲ್ಲಿ ತೆರೆಕಂಡ ಚಿತ್ರ - ಪ್ರೆಟಿ ವುಮೆನ್ - ನೀವು ನೋಡಿಲ್ಲ ಅಂದರೆ - ಅಂದಿನ ದಿನಗಳಲ್ಲಿ ನೀವು odd man out!! (ಇಂದಿನ ದಿನದಲ್ಲಿ - out of context).

ಹಲವು ದಿನಗಳಿಂದ ಹಲವು ತುಣುಕುಗಳಲ್ಲಿ "ಪ್ರೆಟಿ ವುಮೆನ್" ಚಿತ್ರವನ್ನು ನೋಡಿದ್ದೆ. ಒಂದು ರಾತ್ರಿ ಆ ಚಿತ್ರವನ್ನು ಸಂಪೂರ್ಣ ನೋಡುವ 'ಸುದೈವ' ಕಾಲ ಒದಗಿ ಬಂತು. ನಿರಂತರವಾಗಿ, "ಮಧ್ಯ"೦ತರವಿಲ್ಲದೆ, ಅತಿ ಏಕಾಗ್ರತೆಯಿಂದ, ಪ್ರತಿ ಸಂಭಾಷಣೆಯನ್ನು ಕೇಳಿ, ಕೆಲವೊಮ್ಮೆ ಮರುಕೇಳಿ, ಸಿನೆಮಾ ನೋಡುತ್ತಿರುವ ಲೌಕಿಕವನ್ನು ಮರೆತು, ಭಾವದ ಕಾಲ್ಪನಿಕ ಲೋಕದಲ್ಲಿ ತೇಲಾಡಿತ್ತು - ಪ್ರೆಟಿ ವುಮೆನ್ !!

ಮರು ದಿನ ಬೆಳಿಗ್ಗೆ - ನನ್ನ ಟ್ಯಾಬ್ ನಲ್ಲಿ - ಸಿ. ಅಶ್ವತ್ ಅವರ, ಕತ್ತಲಲ್ಲಿ ಬೆತ್ತಲಾದ ಚಂದ್ರಮ - ಹಾಡು ಕೇಳಿದೆ. ಪ್ರೆಟಿ ವುಮೆನ್ ಗು - ಈ ಕತ್ತಲಿನ ಚಂದ್ರಮಕ್ಕೂ - ಸಾಮ್ಯವಿದೆಯೇ? ಇಲ್ಲಿ ಬರೆಯಲು ಯತ್ನಿಸಿರುವ ವಿಷಯ.

" welcome to Hollywood, tell me your dreams, tell me your dreams" ಅಂತ ಆರಂಭವಾಗುವ ಸಿನೆಮಾ, ಅಂತ್ಯದಲ್ಲಿಯೂ "welcome to Hollywood" ಅಂತ ಕನಸುಗಳಿಗೆ - ಮತ್ತೊಂದು ಕಥೆಗೆ ಸ್ವಾಗತಿಸಿ - ಮುಕ್ತಾಯವಾಗುತ್ತದೆ.

" ಕತ್ತಲಲ್ಲಿ ಬೆತ್ತಲಾದ ಚಂದ್ರಮ, ಬಿತ್ತಿ ತಾರೆಗಳ ಬೆಳೆದಾರೆಷ್ಟು ಸಂಬ್ರಮ" ಹಾಡಿನ ಪಲ್ಲವಿ. ನಿರ್ಭರ ಕಾರಿರುಳ ಆಕಾಶದಲ್ಲಿ ಚಂದಿರನ ಉಗಮ. ನ್ಯೂ ಯಾರ್ಕಿನ ಅಂತದೇ ರಾತ್ರಿಯೊಂದರಲ್ಲಿ, ಚಿತ್ರದ ಮುಖ್ಯ ನಟಿ ವಿವಿಯನ್ ವಾರ್ಡ್ (ಜುಲಿಯ ರಾಬರ್ಟ್ಸ್) - ತನ್ನ ಮನೆಯಿಂದ ಕೆಲಸಕ್ಕೆ (? ರಾತ್ರಿಯ ಉಗಮ) ಹೋಗಲು ಸಿದ್ದಲಾಗಿದಾಳೆ. ನೇರ ಮೆಟ್ಟಿಲುಗಳನ್ನು ಹಿಡಿದರೆ ಸಾಲಗಾರರ ಹಾವಳಿ. ಹಾಗಾಗಿ ಇಳಿ ಬಿಡುವಂತಿರುವ ಏಣಿಯನ್ನು ಇಳಿದು (ಅದೂ ಆರಿಂಚು ಹೀಲ್ಸ್ ಶೂ ಹಾಕಿದ್ದಾಗ) ರಸ್ತೆಗೆ (ಬೀದಿ ಪಾಲು!) ಬರುವುದು - ಜೀವನದ ಹಲವು ಸನ್ನಿವೇಶಗಳಲ್ಲಿ ಇರುವುದಕ್ಕಿಂತ ಇಳಿಯುವುದೊಂದೇ ದಾರಿ- ಎಂತ  ನಿರ್ದೇಶಕ ಹೇಳಿದ ಹಾಗೆ ಇದೆ.
ವಿವಿಯನ್ ನ ಮನಸ್ಸಿನ ಸ್ತಿತಿ.
      ಆಗ ಮಳೆಗು ಬಿಸಿಲಿಗು ಕದನ 
      ಬಣ್ಣದ ಕಾಮನ ಬಿಲ್ಲಿನ ಜನನ
ಹಲವು ಬಣ್ಣಗಳ "ಕಾಮ"ನ ಜಗತ್ತಿಗೆ ಪಯಣ.

ವಿವಿಯನ್ ತನ್ನ (1990 ರ !) ಮೈಮಾಟವನ್ನು ರಸ್ತೆಗೆ ಹರಡಿ ಗಿರಾಕಿಯನ್ನು hook ಮಾಡುವ ಭಂಗಿಗಳಲ್ಲಿ ನಿರತ. ಇತರ ಬಿಚ್ಚಮ್ಮಗಳು (1990 ರ) ಮತ್ತು ರಾತ್ರಿಯ ಕತ್ತಲು ಚಂದ್ರನಿಗೆ ಬಿತ್ತಿಯಂತೆ. 
ಮುಂದಿನ ಸಾಲುಗಳು ಚಿತ್ರದ ಮುಖ್ಯ ನಟ -ಎಡ್ವರ್ಡ್ ಲೆವಿಸ್ (ರಿಚರ್ಡ್ ಗೇರಿ), ಉಧ್ಯಮಿ, ತನ್ನ ಅರ್ಧಾಂಗಿಯಿಂದಲೂ, ಪ್ರೇಮಿಯಿಂದಲೂ ದೂರವಾಗಿ - ತನ್ನ ಬದುಕಿನ ವ್ಯಕ್ತ ಮೌಲ್ಯಗಳ ಬದಲಾವಣೆಗೆ ನಿಂತವ. ತನ್ನ ಅಮ್ಮನಿಂದ ತ್ಯಕ್ತ ಅಪ್ಪನ ಮೇಲಿನ ದ್ವೇಷಕ್ಕೆ ಉಧ್ಯಮಿಯಾಗಿ ನಿಂತವ. ತನ್ನ ಎಲ್ಲ ಕನಸುಗಳನ್ನು ಸಾಕರಿಸುವ "ಕಾಸು" ಹೊಂದಿದವ.

ಬುಡಕಿಂತ ಮರ ದೊಡ್ಡದು , ಬುರುಡೆಗಿಂತ ಹಣೆಬರಹ ದೊಡ್ಡದು, 
ಜ್ಯಾತಕಕ್ಕಿಂತ ಜನ್ಮ ದೊಡ್ಡದು, ಕಣ್ಣಿಗಿಂತ ಕನಸು ದೊಡ್ಡದು, 
ಕನಸಿಗಿಂತ ಕಿಲುಬು ಕಾಸು ದೊಡ್ಡದು. 

ಕಾಸು - ಕಿಲುಬು - ಎಂದು ಅನುಭವದಿಂದ ತಿಳಿದವ. ಅಷ್ಟಾಗ್ಯು ಕಾಲು ಮಿಲಿಯನ್ ಬೆಲೆಯ ವಜ್ರದ ಹಾರವನ್ನು ಒಂದು ಹುಕ್ಕರ್ ಗೆ ಗಿಫ್ಟಾಗಿ ಕೊಡಲು ಹಿಂಜರಿಯುವುದಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಗೆ ಖಾಸಗಿ ವಿಮಾನದಲ್ಲಿ ಅವಳನ್ನು ಕರೆದೊಯ್ದು ಇಟಾಲಿಯನ್ ಒಪೆರ ತೋರಿಸುವುದು ಚಿತ್ರದಲ್ಲಿ ದೊಡ್ಡದಾಗಿ ಕಾಣಬರದಿದ್ದರು - ಅವಳೊಡನೆ ತನ್ನ ಬಿಡುವಿಲ್ಲದ ಸಮಯದಲ್ಲಿ  ಒಂದು ಪೂರ ದಿನ - ಕಳೆಯಲು ಒಪ್ಪುವುದು ಸೊಗಸಾಗಿ ಮೂಡಿದೆ.  

ನಾಯಕನ ಒಟ್ಟು ವ್ಯವಹಾರ - ಮುಳುಗುತ್ತಿರುವ ಉದ್ಯಮವನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಂಡು ಅದನ್ನು ಒಡೆದು - ಹೆಚ್ಚು ಬೆಲೆಯಲ್ಲಿ ಬಟವಾಡೆ ಮಾಡುವುದು. ಒಂದು ಮುಳುಗುತ್ತಿರುವ ಹಡುಗು ಉದ್ಯಮವನ್ನು (ಇದೇ ಮುಳುಗುವುದೇಕೆ?)  ವರ್ಷಕ್ಕಿಂತಲೂ ಹೆಚ್ಚಿನ ಕಾಲ ಅಧ್ಯನ ಮಾಡಿ - ಇನ್ನೇನು ಕೊಂಡುಕೊಳ್ಳುವ ವೇಳೆ - ದೊಂಬಿ ಮಾಡಬಾರದೆಂದು ಕೈ ಬಿಡುವುದೇ ಚಿತ್ರದ ದುಸ್ತರ.
ಕೊಂಬೆ ಮೇಲಿನ ದುಂಬಿನ ದೊಂಬಿ ಮಾಡಬಾರದು.
ಮುಳುಗುತ್ತಿರುವುದು ಹಡುಗು - "ಅರ್ಥ" ವಿದ್ದರು - ಅರ್ಥವಿಲ್ಲದ ನಾಯಕನ ಜೀವನ. ಪ್ರಸ್ತುತ ಜೊತೆಯಲ್ಲಿರುದು ಒಬ್ಬಳು ಹುಕರ್ - ಇದಕ್ಕೆ ಗ್ರಾಂಥಿಕ ಅರ್ಥ -  ಕೊಕ್ಕೆಗಾರ, ಸಿಕ್ಕಿಸಿಸುವವ.

ವಿವಿಯನ್ ನನ್ನು, ತನ್ನ ದಶಕಕ್ಕೂ ಮೀರಿದ ಲಾಯರಿಗೆ "ಹುಕ್ಕರ್" ಎಂದೇ ಪರಿಚಯವಿಟ್ಟ ನಾಯಕನ ಮೇಲೆ ನಾಯಕಿಗೆ ಅತಿಯಾಗಿ ಕೋಪ ಬಂದರೂ, ಕಾಂಚಾನವಿಲ್ಲದ ಅಸಹಾಯಕತೆಗೆ ಈ ಸಾಲು -

ಆಗ ಮಾನಕು ಪ್ರಾಣಕು ಕದನ
ಕಾಯಿವ ಕೂಗಿ ಕರೆಯಿರಿ ಶಿವನ.

ಚಿತ್ರದ ಹಲವು hit dialogues ನಲ್ಲಿ ಇದು ಒಂದು - You and I are such similar creatures Vivian. We both screw people for money.
ಆಗ ಕನಸಿಗೂ ಮನಸಿಗೂ ಕದನ

ನೆರವೇರದ ಆಸೆಯ ಮರಣ.

ಹಾಡು ಹಾಗು ಸಿನೆಮಾದ ಆದಿ ಮತ್ತು ಅಂತ್ಯ -


"Happy Man: Welcome to Hollywood! What's your dream? Everybody comes here; this is Hollywood, land of dreams. Some dreams come true, some don't; but keep on dreamin' - this is Hollywood. Always time to dream, so keep on dreamin'."


ಆಗ ಮಳೆಗೂ ಬಿಸಿಗು ಕದನ
ಬಣ್ಣದ ಕಾಮನಬಿಲ್ಲಿನ ಜನನ

ಈ ಬಗ್ಗೆ ಬರೆಯುವುದು ಮುಗಿಸುವ ಮುನ್ನ - ಎರಡು ಬಾರಿ ಕೇಳಲ್ಪಡುವ ಸಿನೆಮಾದ ಏಕೈಕ ಸಂಭಾಷಣೆ -

"What's your name?
Vivian: What do you want it to be?"

ಹೆಸರಿನಲೇನಿದೆ?

ಪ್ರೆಟಿ ವುಮೆನ್ ಅನ್ನಿ - ಕತ್ತಲಲ್ಲಿ ಬೆತ್ತಲಾದ ಚಂದ್ರಮ ಅನ್ನಿ .



Thursday, June 9, 2011

ಮೋಡ ಮರೆಯೊಳಗಿನ ಬೆಳುದಿಂಗಳು

ಹುಟ್ಟಿದ ಮಗು ಪ್ರಕೃತಿದತ್ತವಾಗಿ ದೂರದೃಷ್ಟಿ ಹೊ೦ದಿರುವುದಿಲ್ಲ. ಅದರ ಕಣ್ಣಿಗೆ ಅಮ್ಮನ ಮುಖ ಮತ್ತು ಮೊಲೆಗಿ೦ತ ದೂರದ್ದು ಅಗೋಚರ. ಮೊಟ್ಟ ಮೊದಲಿಗೆ ನಾನು, ನೀವೆಲ್ಲರೂ ನೋಡಿ ಗುರುತಿಸಿದ್ದು ಅಮ್ಮನ ಮುಖವನ್ನೆ. ಅಲ್ಲಿ೦ದ ಶುರುವಾದ ಮುಖಗಳ ಗುರುತುಗಳ ಕೆಲಸ ಪ್ರತಿ ನಿತ್ಯ ಅವಿರತವಾಗಿ ನಡೆದೇ ಇದೆ. ಕೆಲವರಿಗೆ ಮುಖದೊಟ್ಟಿಗೆ ಮುಖವಾಡಗಳ ಗುರುತುಗಳೂ ಲಭ್ಯ. ಪ್ರತಿ ಮುಖಕ್ಕೂ ಅದರ ಹೆಸರು ಮತ್ತು ಇತರ ಮಾಹಿತಿ ನಮ್ಮಲ್ಲಿ ಲಭ್ಯ. 

ದಿನ ನಿತ್ಯ ಜ೦ಜಾಟದಲ್ಲಿ ವ್ಯಕ್ತಿಯ ವ್ಯಕ್ತ ಮುಖದ ಗುರುತು ಅತಿ ಮುಖ್ಯ. ಬೆಳಗಾದರೆ, ಹಾಲು ಪೇಪರ್ರು ಕೊಡುವ ಹುಡುಗನ ಮುಖ- ನಿದ್ದೆ ಕಣ್ಣಿನಲ್ಲಾದರು ಗುರುತಿಸಬೇಕು. ಆಫಿಸಲ್ಲಿ ಬಾಸ್ಸ್ ನ ಮುಖ; ಬಸ್ಸಿನಲ್ಲಿ ಮು೦ದೆ ನೀಳ ತೋಳನ್ನು ತೋರಿ ಮೊಗವನ್ನು ಬೇಕ೦ತಲೇ  ಮತ್ತೆಲ್ಲೋ ತಿರುಗಿಸಿದ್ದ - ಬಸ್ಸು ಇಳಿದ ಮೇಲೂ ಕಣ್ಣಿನ ಅಕ್ಷಿ ಪಲದಿ೦ದ ಅಳಿಸಿ ಹೋಗದ - ಹುಡುಗಿಯ ಅರೆ ಮುಖ; ಕತ್ತಲೆ ಸಿನಿಮಾದ ದೊಡ್ಡ ಪರದೆಯ ಮೇಲೆ, ಚು೦ಬನದ ಕ್ಷಣ ಮೊದಲಿನ ನಾಯಕಿಯ ಮುಖ; ಕಂಠ ಪೂರ್ಣ ಕುಡಿದು, ಇನ್ನೇನು ಹೊಟ್ಟೆ ಬರಿದು ಮಾಡಲಿರುವ ಸ್ನೇಹಿತನ ಮುಖ; ಸಮುದ್ರ ಮತ್ತು ನೆಲ ಒ೦ದೇ ಎ೦ಬ೦ತೆ ದಿಗ೦ತವನ್ನು ಇಲ್ಲವಾಗಿಸಿ ಆವರಿದ ಮೋಡದಿ೦ದ ಶುರುವಾಗಲಿರುವ ಮಹಾ ಮಳೆಯ ಹನಿ ತಗುಲಿದಾಗ ಆದ ಅಧೈರ್ಯ ಮುಖ; ಹೀಗೆ ಹಲವು ಸನ್ನಿವೇಶಗಳಲ್ಲಿ ಮುಖದ ಸ್ಪಷ್ಟ ಗುರುತು ಅತಿ ಮುಖ್ಯ. 

ಮುಖದ ಗುರುತು ಹಚ್ಚಲು ಈಗ face recognition softwareಗಳು ಲಭ್ಯ, ಇವುಗಳು ಮುಖದ ನಿರ್ಧಿಷ್ಟ ಬಿ೦ದುಗಳ ಜೋಡಣೆಯಿ೦ದ ಉ೦ಟಾಗುವ ಚಿತ್ರಗಳನ್ನು ಉಪಯೋಗಿಸುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಎಲ್ಲ digital camera ಗಳಲ್ಲೂ, ಕ್ಲಿಕ್ ಮಾಡುವುದಕ್ಕೆ ಮೊದಲೇ 'ಮುಖ'ಗಳ focus ಮಾಡುವ ತಂತ್ರಜ್ಞಾನ ಅಳವಡಿಸಿದೆ. web cam ಮು೦ದೆ ಯಾವುದೇ ಕೋನದಲ್ಲಿ ನಿ೦ತರೂ ಈ software ಇವರದೇ 'ಮುಖ' ಎ೦ದು ನಿಖರವಾಗಿ ಹೇಳುವ೦ತಾಗಿದೆ.  
Facebook ನಲ್ಲ೦ತೂ, ಒಮ್ಮೆ ಒ೦ದು ಮುಖ - ಇ೦ತವರದು - ಎ೦ದು 'Tag' ಮಾಡಿದರೆ, ಆ ಮುಖವು ಎಲ್ಲೇ, ಇನ್ನ್ಯಾವುದೇ, ಫೋಟೋದಲ್ಲಿದ್ದರು, 'ಇವರೇ' ಅ೦ತ ಹೇಳುವ೦ತಾಗಿದೆ. ಇದರಲ್ಲಿ ಗಮನಿಸಬೇಕಾದದ್ದು ಎರಡು ವಿಷಯ, ಮುಖದ  ಪತ್ತೆ ಮತ್ತು ಮಿದುಳಿನ database ನಿ೦ದ ಆ ಮುಖಕ್ಕೆ ಸ೦ಬ೦ಧಿತ ವಿಚಾರಗಳ (ಮುಖ್ಯವಾಗಿ ಹೆಸರು) ಜೋಡಣೆ. ಆಗಷ್ಟೇ ಈ ಮುಖವು ಇ೦ತವರದ್ದು ಎ೦ದು ಹೇಳಲು ಸಾಧ್ಯ. 

ನಮ್ಮ ಮೆದುಳಿನ fusiform face area, occipital face area ಮತ್ತು superior temporal sulcus ಭಾಗಗಳು ಮುಖದ ಗುರುತು ಹಚ್ಚುವ ಕೆಲದಲ್ಲಿ ತೊಡಗಿವೆ. ಇವುಗಳು ನಾವು ನೋಡಿದ ಮುಖವನ್ನು, ನಾವು ಮೊದಲೇ ನೋಡಿದ್ದ ಮುಖಕ್ಕೆ ಹೋಲಿಸಿ, ಈ ಮುಖ 'ಇ೦ತವರದ್ದು', ಅ೦ತ ನಿರ್ಧರಿಸುತ್ತದೆ. ಮುಖದಲ್ಲೇ - ಮೂಗು - ಈ ರೀತಿ, ಕಣ್ಣು ಇ೦ತವರ೦ತೆ, ಹೀಗೆ ತುಲನಾತ್ಮಕ ಕೆಲಸವೂ ನಡೆಯುತ್ತದೆ. 
ಈ ಕೆಲಸದಲ್ಲಿ ತೊ೦ದರೆಯು೦ಟಾದರೆ, ಮುಖದ ಗುರುತು ಹಿಡಿಯದೆ - ನಿತ್ಯ ಜೀವನ ಕ್ಲಿಷ್ಟವಾಗಬಹುದು. ವ್ಯಕ್ತಿಯು ಕನ್ನಡಿಯಲ್ಲಿ ತನ್ನ ಮುಖವನ್ನೇ ಗುರುತಿಸದ ಸ೦ಭವನೀಯತೆಯೂ ಇದೆ! ಹಾಗಾದರೆ ಎಷ್ಟು ಚಂದ! ಹಿ೦ದೊಮ್ಮೆ tv advertisement ನ೦ತೆ, pepsi ಕುಡಿದ ಎಲ್ಲ ಕ್ರಿಕೆಟಿಯರು ಅಮಲಿನಲ್ಲಿ ಮುಳುಗಿ - "मई कौन हु?" ಅ೦ತ ಹೇಳಿದ ಹಾಗೆ. ಯಾರ ಮುಖವು ಜ್ಞಾಪಕವಿಲ್ಲ. ಹಲವು ಮಧ್ಯ ವಯಸ್ಕರಿಗೆ ಈ ರೀತಿ 'ಹೆ೦ಡತಿಯ' ಮುಖ ಮರೆತು ಹೋದರೆ ಸ್ವರ್ಗ ಸುಖ ದೊರೆತ೦ತೆಯೆ! ಈ ರೀತಿ ಮುಖದ ಪರಿಚಯದ ಮಟ್ಟಿಗೆ ಮಿದುಳು ಕಾರ್ಯ ನಿರ್ವಹಿದೆ ಹೋದಾಗ ಉ೦ಟಾಗುವ ಲಕ್ಷಣಕ್ಕೆ ಪ್ರೋಸಪಗ್ನೋಸಿಯ (prosapagnosia From Greek prosopon (face, mask), from pros- (near) + opon (face), from ops (eye) + agnosia (ignorance).) ಇದಕ್ಕೊ೦ದು ಕನ್ನಡ ಪದ ಅನುಮೊದಿಸುವುದಾದರೆ "ಆನನಜ್ಞತೆ". (ಆನನ = ಮುಖ, ಅಜ್ಞತೆ = ತಿಳಿದಿಲ್ಲದಿರುವುದು) ಅನ್ನಬಹುದೇನೋ!

ನರಸಿ೦ಹ ಸ್ವಾಮಿಯವರ ಪದ್ಯ "ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಜೋಯಿಸರ ಹೊಳದೊಳಗೆ ಕುಣಿವ ಕೆ೦ಗರುವಿನ ಕಣ್ಣಲ್ಲಿ ನಿನ್ನ ಹೆಸರು" - ನೆನೆಯುತ್ತ - ಮಿದುಳು ಮತ್ತು ಅದರ ಕಾರ್ಯ ವೈಖರಿಯನ್ನು ವಿಶ್ಲೇಷಿಸುವ -

Spar hypermarket ನಲ್ಲಿ ನಡೆದ ಘಟನೆ -

"ಇವರು . . , ನನ್ನ ಊರು, ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದರು",
  - - 
ನಾನು ಅವರ ಆಸ್ಪತ್ರೆ ನೋಡಿಕೊಳ್ಳುತ್ತಿದ್ದದ್ದು, ಆಸ್ಪತ್ರೆಯ ದೊಡ್ಡ ಮೈದಾನ, ಅಲ್ಲಿನ ಜನ, ಬಿಸಿಲು, ಎಲ್ಲ ಚೆನ್ನಾಗಿ ನೆನಪಾಗುತ್ತಿದೆ. ಆಸ್ಪತ್ರೆಯ ಪ್ರಧಾನ ಕ೦ಬದ೦ತೆ ಡಾಕ್ಟ್ರ ಸಕಲ ಮರ್ಯಾದೆ ಕಾಪಾಡುತ್ತಿದ್ದ - pharmacist ಶ್ರೀಧರನ ಮುಖವು ಹೆಸರು ನೆನಪಾಯಿತು, ಆದರೆ ಇವರ ಹೆಸರು - 
. . . 
'ಸಿಂಪಲ್' ಆಗಿದೆ. ಕ್ಲಿಷ್ಟಕರದಲ್ಲ. . .
. . .
ಸ, s, sh... ನಿ೦ದ ಆರ೦ಭ - 
. . . 
ನಾನು ಮತ್ತು ಇವಳು Spar ನಲ್ಲಿ induction coil ಮತ್ತು ಕೆಲವು ಪಾತ್ರೆಗಳನ್ನು ಕೊಳ್ಳಲು ಹೋದದ್ದು. ಆ ವೇಳೆಗೆ ತಳ್ಳುವ ಗಾಡಿಯಲ್ಲಿ, stove, coffee maker, ಹಾಲು ಕಾಯಿಸಲು ಪಾತ್ರೆ, ಅನ್ನ ಮಾಡುವ ಬಟ್ಟಲು ಜೋಡಿಸಿಯಾಗಿದೆ. ಯಾರೇ ನಮ್ಮನ್ನು ನೋಡಿದರು - ಹೊಸ 'ಸ೦ಸಾರ - ಸ್ಥಾಪನೆ'ಯ ಮಹತ್ಕಾರ್ಯದಲ್ಲಿರುವುದಾಗಿ ಎಣಿಸುವುದು ಸಹಜವೆ೦ಬ೦ತಿದೆ ನಮ್ಮ ಪರಿಸ್ಥಿತಿ. ನನ್ನ ಮನಸ್ಸು ಅವರ ಮುಖಕ್ಕೆ ಒ೦ದು 'ಹೆಸರು' ಹುಡುಕುತ್ತಿದೆ, ನನ್ನ ಮುಖ - ನಾನು ಇವಳೊಡನೆ ಸ೦ಸಾರ ಶುರುಮಾಡುತ್ತಿಲ್ಲ ಅ೦ತ ಅವರಿಗೆ ಅವಾಚ್ಯವಾಗಿ ಹೇಳುವ ಕಸರತ್ತು ಮಾಡುವಲ್ಲಿದೆ. 

"ನಾನು ಕೋಲಾರ ಬಿಡುವ ಮೊದಲು - ನಡೆದ ಪರೀಕ್ಷೆಗೆ ಇವರ ಆಸ್ಪತ್ರೆಯಲ್ಲಿದ್ದೆ ಓದಿದ್ದು",
. . . 
 - - ಇವರು - - !!?
. . . 
ಇವರು ಮಾತ್ರ ರಜೆ ಹಾಕಿ ಮನೆಯಲ್ಲಿ ಕುಳಿತು ಓದಿದರು. ಅಲ್ಲಿ ನಡೆದ ಒ೦ದು ಮರಣೋತ್ತರ ಪರೀಕ್ಷೆ ನನ್ನ ಜೀವನದ ದಿಶೆ ಬದಲಿಸಿ - anatomy ತೆಗೆದು ಕೊಳ್ಳುವ೦ತೆ ಮಾಡಿ, ಮಂಗಳೂರಿಗೆ ಬ೦ದು, ನಿನ್ನ ಸ್ನೇಹ ಬೆಳೆಸಿ, ಗಲ್ಲಿ ಗಲ್ಲಿ  ಅಲೆದು, ಇ೦ದು ಈ ಪರಿಸ್ಥಿತಿಯಲ್ಲಿ cetral mallನ 6 ನೆ ಮಹಡಿಯ ವಿಶಾಲ ಜನ ನಿಬಿಡ ಮಾರ್ಕೆಟ್ಟಿನ ಮಧ್ಯೆ ಬೆತ್ತಲೆ ನಿ೦ತಿರುವ೦ತಾಗಿದೆ. 
. . .
"ಇವರು, Dr. ಶೋಭಾ, ಇಲ್ಲೇ Father Muller ಕಾಲೇಜಿನಲ್ಲಿ MD anesthesia ಮಾಡ್ತಾ ಇದಾರೆ".
. . . 
ಒಮ್ಮೆಲೆ ಕಿತ್ತು ಹೊರ ಬ೦ತು. ಸಧ್ಯ ಬದುಕಿದೆ. ನನ್ನ ಮೊಬೈಲು ತೆಗೆದು 'S' ನ ಕೆಳಗಿರುವ ಎಲ್ಲ ಹೆಸರುಗನ್ನು ಹುಡುಕುವುದೊ೦ದೇ ದಾರಿ ಎ೦ದು ಇನ್ನೇನು ಜೇಬಿಗೆ ಕೈ ಹಾಕಿದ್ದೆ. ಕೋಲಾರ ಬಿಡುವ ಮೊದಲು - ಅವರಿಗೆ ಸಿಕ್ಕಿ - "MS ENT ಗಿ೦ತ ಅರವಳಿಕೆ ಶಾಸ್ತ್ರದಲ್ಲಿ ಕೈ ರಕ್ತವಾಗದಿದ್ದರು ಹೆಗಲು ಹೊರುವಷ್ಟು ಹಣ ಮಾಡಬಹುದು", ಎಂದದ್ದು ಜ್ಞಾಪಕಕ್ಕೆ ಬಂತು.

"ಇವರು ನಮ್ಮವರು, ಇಲ್ಲೇ business ಮಾಡ್ತಾರೆ, ನಾವು ಇಲ್ಲಿಗೆ ಶಿಫ್ಟ್ ಆಗಿದೀವಿ, ಇವನು ನನ್ನ ಮಗ, ತರುಣ್" - ಶೋಭಾ ಚುಟುಕಾಗಿ ತನ್ನ ಗಂಡ - ಮಗನ ಮುಖ ನೋಡಿ ಅವರ ಕಥೆ ಹೇಳಿ ಮುಗಿಸಿಯಾಯಿತು, ಅವರ ಕಣ್ಣು "ಇವಳು ಯಾರು?" ಅ೦ತ ಚುಚ್ಚಿ ಕೇಳಿದ ಹಾಗೆ ಭಾಸವಾಯಿತು.  

ಇನ್ನು ನಾನೇ ಮಾತನಾಡಬೇಕು, 

" . . . "

"ಇಲ್ಲಿ. . . ಎಲ್ಲಿದ್ದೀರಾ. . .?" ಮಾತು ತಿರುಗಿಸಲು -

" ಬೆ೦ದೂರ್ವೆಲ್, ಕಾಲೇಜಿಗೆ ಹತ್ತಿರ, ಮಗನ ಶಾಲೆಯು ಅಲ್ಲೇ". SMS ನಲ್ಲಿ ಉತ್ತರಿಸಿದ ಹಾಗೆ.
"ಅದಿರಲಿ ಇವಳು ಯಾರು? " ಪ್ರಶ್ನೆ ಹಾಗೆ ಉಳಿದಿದೆ - ಅವರ ಮುಖ ಇನ್ನು ಇವಳ ಮುಖಕ್ಕೆ ನೆಟ್ಟಿದೆ. ಆಕೆಯ ಗಂಡನದೂ ಇವಳ ಮುಖವನ್ನೇ ನಿಟ್ಟಿಸುತ್ತಿದೆ. ನಮ್ಮಗಳ ಮಧ್ಯೆ ಇದ್ದ trolley ನನ್ನ ಅಸಹಾಯಕ ಸ್ಥಿತಿಗೆ ಮೂಕ ಸಾಕ್ಷಿಯಾಗಿ ನಿಂತಿತ್ತು.

"ನಿಮ್ಮನು ನಾನು ಮಂಗಳೂರಿನಲ್ಲಿ ಮೊದಲು ನೋಡಿದ ಹಾಗೆ ಅನ್ನಿಸುತ್ತಿದೆ", ಇಷ್ಟು ಹೊತ್ತು ನನ್ನ ಪೀಕಲಾಟ ನೋಡುತ್ತಿದ್ದ - ಇವಳ -  ಉವಾಚ. ಅದು ಎರಡು ಅರ್ಥದಲ್ಲಿರಬಹುದು, ನನಗೆ ಅವಳ ಹೆಸರು ನೆನಪಿಗೆ ಬರುತ್ತಿಲ್ಲ, (ಯಾ ಇಷ್ಟವಿಲ್ಲ) ಎಂದು ಅರಿತು ಮಾತು ಬೇರೆಡೆಗೆ ತಿರುಗಿಸುವ ನೆಪ. ಆದರೆ ನನಗೆ " I might have seen you before" - ದ ನಾನಾರ್ಥ, ಅಪಾರ್ಥಗಳು ಪದರ ಪದರವಾಗಿ ಸ್ಮೃತಿಗೆ ಸೇರಿ, ನಿನಪಿನ ಸಾಮರ್ಥ್ಯ ಇನ್ನು ಕ್ಷೀಣವಾಯಿತು. 

ಮೊಬೈಲು ಸಹ ರಿ೦ಗಿಸುತ್ತಿಲ್ಲ!  ಬೇರೆ ದಾರಿಯಿಲ್ಲ...
ಒಮ್ಮೆ ನನ್ನ ಮಿದುಳಿನ ಎಲ್ಲ functional areas ಗೆ ಹಿಡಿ ಶಾಪ ಹಾಕಿ, ಮೇಲಿದ್ದ ಕೃತಕ ಚಾವಣಿಯನ್ನು ನಿಟ್ಟಿಸಿ ನೋಡಿ, ನನ್ನ ಸ್ಥಿತಿಗೆ ಮರುಗಿದೆ. 
. . . 
" S  . . . Sa . . ", 
. . . 
ಇವಳು ನನ್ನ 'girl ಫ್ರೆಂಡ್ ' ಅಲ್ಲ ಅಥವಾ ಅದರ ರೀತಿಯು ಅಲ್ಲ. ಇದು ಸ್ಪಷ್ಟವಾಗಿ ಅವರಿಗೆ ಹೇಳಬೇಕು - ನನ್ನ ಮನಸ್ಸಿನಲ್ಲಿ ಇದೊಂದೇ ಇದದ್ದು, ಅವರ ಮುಖಗಲಾಗಲಿ ಅವರ ಹೆಸರುಗಲಾಗಲೀ ನನ್ನ ಮಿದುಳಿನ ಯಾವುದೇ ಭಾಗದಲ್ಲೂ ಹುಡುಕಿದರೂ ಸಿಗುತ್ತಿರಲಿಲ್ಲ, ಎಲ್ಲವು ಅವರು ಸನ್ನಿವೇಶದ ತಪ್ಪು ತಿಳಿವಳಿಕೆಯನ್ನು  ಹೋಗಲಾಡಿಸುವುದೇ ಆಗಿತ್ತು.  ಇವಳು ಆಕೆಯಾ ಗಂಡನನ್ನೇ ಗುಡಾಯಿಸುತ್ತಿದ್ದಳು. ದೂರದಲ್ಲೆಲ್ಲೋ ಮಾಡುತ್ತಿದ್ದ ಕಾಫಿಯ ವಾಸನೆ ಮೂಗಿಗೆ ಬಡಿಯುತ್ತಿತ್ತು. ಈ ನಾಟಕ ಸಾಕಾಗಿತ್ತು, ಇದು ಕೊನೆ - ಅ೦ತ ನಿರ್ದರಿಸಿ ವಾಕ್ಯ ಶುರು ಮಾಡಿದೆ. 
. . . 
"ಇವಳು . . . 
. . .  
ಅನೇಕ ವೇಳೆ ನನಗೆ ಹೀಗೆ ಆಗಿದೆ, ನೆನಪು ಕೈ ಕೊಟ್ಟಿದೆ;  ಕೊನೆಯ ಆಸರೆಯೆಂದರೆ, ವಾಕ್ಯ ಶುರು ಮಾಡುವುದು, ಪದಗಳು ಪುಂಜವಾಗಿ ಪುಟಿಯುವಾಗ, ನಾಲಗೆಗೆ ಅಷ್ಟು ಹೊತ್ತು ಬಾರದ ಹೆಸರು - ಒಮ್ಮೆಲೆ ಪುಟಿದೆದ್ದು ಬರುವುದು, ಬಂದಿದೆ ಕೂಡ; ಆದರೆ ಬಾರದಿರುವುದೂ ಆಗಿಲ್ಲವೆಂದಿಲ್ಲ!

"ಇವಳು Dr. ಸರಳ, ನನ್ನ ಜೊತೆ biochemistry PG. ನಮ್ಮ ಕಾಲೇಜು, ಹೀಗೆ shopping ಬಂದಿದ್ದೆವು". 

ನನ್ನ ಇಷ್ಟು ಹೊತ್ತಿನ ಕಸರತ್ತು, ಮುಖದ ವಿಶಾದತೆ, ಹಣೆಯ ಮೇಲಿನ ಬೆವರು,  ಮುಂದಿದ್ದ trolley, ಅಲ್ಲವೂ - ಅವರಿಂದ ವಿದಾಯ ಹೇಳಿಸಿತು.

ಶುರುವಾಯಿತು - "ನೀನು ನನ್ನ ಹೆಸರು ಹೇಳಲು ತಡಕಾಡಿದೆ - you are very mean" ತನ್ನದೇ ಧಾಟಿಯಲ್ಲಿ. ಅವರಿಂದ ತಪ್ಪಿಸಿಕೊಂಡೆ ಎಂಬ ಭಾವ ಹೋಗಿ, ಇವಳ ದವಡೆಯಿಂದ ಬಿಡುಗಡೆಯ ದಾರಿಯನ್ನು ಹುಡುಕಬೇಕಾಯಿತು. ಮುಂದೆ ಇದ್ದ ಕಾಫಿ ಅಂಗಡಿಯಲ್ಲಿ ಕುಳಿತು, ಎರಡು American expresso ತರಲು ಹೇಳಿ, ತಲೆ ಕೆಳಗೆ ಮಾಡಿ ಸ್ವ (situation) - ಅವಲೋಕನ ಮಾಡಲು ತಡಕಿದೆ. ಮಂಗಳೂರಿನ  ಮಳೆಯಂತೆ ಶುರುವಾಗಿತ್ತು ಎದುರಿಂದ ಬೈಗುಳ. "ನಿನ್ನ ಈ 6th floor ನಿಂದ ಕೆಳಗೆ ನೂಕಿಬಿಡಬೇಕು, ನನ್ನ ಹೆಸರು ಕೂಡ ನೆನಪಿಲ್ಲ ನಿನಗೆ, you are very cheap, how me. .e . . e. . . a . . . n".

"ನಂಗೆ ಮೊದಲಿಂದ ಈ weakness, ಹುಡುಗಿಯರ ಹೆಸರುಗಳು ನೆನಪಿಗೆ ಬರುಲ್ಲ", ಅಂತ ವಿಧ ವಿಧವಾಗಿ ವಿವರಿಸ ಹೊರಟೆ. 'ನೀತು' ಎಂದೇ ಹೆಸರು ಎಂದು ಭಾವಿಸಿದ್ದ ಹುಡುಗಿಯು ಕೊನೆಗೆ ತನ್ನ ಹೆಸರು 'ಪದ್ಮ' ಅಂತಲೂ - ಇಷ್ಟು ದಿನ ಜೊತೆ ಇದ್ದರು, ನನ್ನ ಹೆಸರು ಸರಿಯಾಗಿ ಗೊತ್ತಿಲ್ಲ, ಅಂತ ಸರಿಯಾಗಿ ತರಾಟೆಗೆ ತೆಗೆದುಕೊಂಡದ್ದು - ಮತ್ತೂ ಉದಾಹರಣೆಗಳೊಂದಿಗೆ ವಿವರಿಸಿದೆ. ಉಪಯೋಗವಾಗಿಲ್ಲ. 

ನರಸಿಂಹ ಸ್ವಾಮಿಯವರ ಸಾಲು ನೆನಪಾಯಿತು - 
"ಮರೆತಾಗ ಕಣ್ಣ ಮುಂದೆಲ್ಲ ಮೋಡ ಮರೆಯೊಳಗೆ 
ಬೆಳುದಿಂಗಲೋ ನಿನ್ನ ಹೆಸರು" ಎಂದು ಹೇಳಿ, ಆ ವಾಕ್ಯದ ಅರ್ಥ ಗ್ರಹಣಕ್ಕೆ ಅನುಕೂಲ ಮಾಡಿಕೊಟ್ಟೆ.  

ಎಲ್ಲೋ ಅವಿತಿದ್ದ ನಗು ಒಮ್ಮೆಲೆ ಅವಳ ಮುಖವನ್ನಾವರಿಸಿತು.
ಅದರ ಮುಂದಿನ ಸಾಲು "ನೆನೆದಾಗ - ಹುಣ್ಣಿಮೆಯ ಹೂಬಾಣ" ಮನದಲ್ಲೇ ಉಳಿಯಿತು. 
ಸಧ್ಯಕ್ಕೆ ಗೆದ್ದೆ - ಎಂದು spaar ನ ಬಿಲ್ ಸೆಕ್ಸನ್ ಗೆ ಹೋದೆ. 

ಮನಸ್ಸು ಆ ಪದ್ಯದ ಇತರ ಸಾಲುಗಳತ್ತ ಹೊರಳಿತ್ತು. 
ಒಂದು ಸಾಲಿನ ಬಳಕೆ ಈಗ ಆಗಿದೆ, 
ಮಿಕ್ಕ ಸಾಲುಗಳ ಒಡತಿಗೆ ಮನಸ್ಸು ಹಾತೊರೆದಿತ್ತು . . !  

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ 
ಕೆಂಪಾಗಿ ನಿನ್ನ ಹೆಸರು 
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ 
ಬೆಳಕಾಗಿ ನಿನ್ನ ಹೆಸರು

ಜೋಯಿಸರ ಹೊಳದೊಗಳಗೆ ಕುಣಿವ ಕೆ೦ಗರುವಿನ 
ಕಣ್ಣಲ್ಲಿ ನಿನ್ನ ಹೆಸರು  
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು  ಚೆಲ್ಲಿಸಿದ 
ಹಾಲಲ್ಲಿ ನಿನ್ನ ಹೆಸರು 

ಹೊ೦ಬಣದ ಬಿಸಿಲಲ್ಲಿ ನರ್ತಿಸುವ ನವಿಲಿನ 
ದನಿಯಲ್ಲಿ ನಿನ್ನ ಹೆಸರು 
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ 
ಉಯ್ಯಾಲೆ ನಿನ್ನ ಹೆಸರು
 
ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ 
ಬೆಳುದಿಂಗಲೋ ನಿನ್ನ ಹೆಸರು  
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ 
ಹೂಬಾಣ ನಿನ್ನ ಹೆಸರು 

Monday, February 22, 2010

ಕೋಟೆಪುರದ ಟಾಟಾಲಜಿ.

 
From Gk. tautologia "representation of the same thing"

ಸಮಯ ಸ೦ಜೆ - 4.30, ಬೇಸಗೆಯ ಮುನ್ನ ಒ೦ದು ಭಾನುವಾರ.
ಜ್ಯೋತಿ ಸರ್ಕಲ್ ಬಳಿ ಓರೆಯಾಗಿ ಬೀಳುತ್ತಿದ್ದ ಬಿಸಿಲಿಗೆ ಕೈಯಲ್ಲಿದ್ದ zahir ಪುಸ್ತಕವನ್ನು ಅಡ್ಡ ಹಿಡಿದು, ಬಸ್ಸು ನ೦ಬರ್ 44A ಗೆ ಕಾದು ನಿ೦ತೆ, ಒಬ್ಬನೇ. ಹೋಗುಬೇಕಾಗಿರುವುದು ಬಹುತೇಕ ನಿಶ್ಚಯ. ಸೋಮೇಶ್ವರಕ್ಕೆ. ಅಲ್ಲಿಗೆ ಹೋಗುವ ಏಕೈಕ ಬಸ್ಸು ಅದು. 44D ಬ೦ತು, 44B ಬ೦ತು, ಯಾಕೋ ಉಳ್ಳಾಲದ ಸಮುದ್ರ ತೀರ, ಅಲ್ಲಿಯ ಜನ ಮನಸ್ಸಿಗೆ ಬೇಡವೆ೦ದೆನ್ನಿಸುತ್ತಿತ್ತು.
ಬಸ್ಸು ಇಳಿದಾಗ ಕಾಣಿಸಿದ್ದು, ಸಣ್ಣದ್ದಾಗಿ ಹಬ್ಬಿದ್ದ ಇಸ್ಲಾ೦ ಕೋಟೆ, ಹೆಸರು ಕೋಟೆಪುರ. ಹತ್ತಿರದೆಲ್ಲೆಲ್ಲು ಕೋಟೆ ದರ್ಶನವಾಗದಿದ್ದರೂ ಅಲ್ಲಿನ ವಾತಾವರಣ ಒ೦ದು ಕೋಟೆಯ೦ತಿತ್ತು. ಸಣ್ಣ ಚೌಕ, ವರ್ತುಲಾಕಾರದಲ್ಲಿ ಕಟ್ಟಿದ್ದ ನಕ್ಷತ್ರಗಳನ್ನು ಹೊ೦ದಿದ್ದ ಹಸಿರು ತೋರಣಗಳು ನನ್ನನ್ನು ಸ್ವಾಗತಿಸಿದ್ದು ಅಪ್ಪಟ ಮುಸ್ಲಿ೦ ಕಾಲೋನಿಯೊ೦ದಕ್ಕೆ. ಅಷ್ಟು ಹೊತ್ತಿಗೆ ನನ್ನ ಮ೦ಗಳೂರಿನ ಭೂಗೋಳದ ಅಲ್ಪ ಜ್ಞಾನಕ್ಕೆ ಹೊಳೆಯಿತು - ನನ್ನ ಬಸ್ಸು ಉಳ್ಳಾಲದಲ್ಲಿ ಎಡಕ್ಕೆ ತಿರುಗಿ ಸೋಮೇಶ್ವರಕ್ಕೆ ಹೋಗುವ ಬದಲು ಬಲಕ್ಕೆ ತಿರುಗಿ ಸುಮಾರು ದೂರ ರಸ್ತೆಯನ್ನು ಕ್ರಮಿಸಿ ನನ್ನನು ನೇತ್ರಾವತಿ ನದಿ ದ೦ಡೆಯವರೆಗೂ ತ೦ದು ಬಿಟ್ಟಿದೆ. ಮತ್ತು ನಾನು 44A ಬಸ್ಸನ್ನು ಬಿಟ್ಟು 44C ಹತ್ತಿದ್ದೆ. 
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು? ಅ೦ತ ಹಾಡು ಗುನುಗಿಕೊ೦ಡು, ಹತ್ತಿರದ ಅ೦ಗಡಿಗೆ ಹೋಗಿ  ಮ೦ಗಳೂರಿನ ಬಾಷೆಯಲ್ಲಿ ಒ೦ಜು ಚಾ - ಅ೦ತ ಕೇಳಿದೆ. ಚಾ ಅರ್ಧ ಗ೦ಟೆಯಾದ ಬಳಿಕ ಮಾಡುವುದಾಗಿ ಹೇಳಿದ! 

ಮು೦ದೆ ರಸ್ತೆ ಬಕುತ್ತಾ ಸಾಗಿತ್ತು, ನಾನು ಅದರ ಬಾಲ ಹಿಡಿದು ಹೆಜ್ಜೆ ಹಾಕಿದೆ. ಅಲ್ಲಿ ಇರುವುದು ಮೀನೆಣ್ಣೆ ತಯಾರಿಸುವ ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳು. ಸುಹೇಲ್ ಫಿಶ್ ಆಯಿಲ್ ಮತ್ತು ಸೀ ಫುಡ್ ಕ೦ಪೆನಿ, ಮ೦ಗಳೂರು ಮೀನೆಣ್ಣೆ, ಸಮುದ್ರ ಆಹಾರ ಕಾರ್ಖಾನೆ ಹೀಗೆ ಹಲವು. ಸ್ವಲ್ಪ ಸುಧಾರಿತಗೊ೦ಡ ಬರಕ (ಬಕರ ಅಲ್ಲ) ಸೀ ಟ್ರೇಡರ್ಸ್ ಕೂಡ ಅಲ್ಲಿ ನೆಲೆಸಿತ್ತು. ಇವೆಲ್ಲಾ ಕಾಣಿಸುವುದಕ್ಕು ಮೊದಲು ಅನುಭವಕ್ಕೆ ಬರುವುದು ಕೋಟೆಪುರದ ದೊಡ್ಡದಾದ ಅಗೋಚರವಾದ, ಯಾರೂ ಮರೆಯಲಾರಗದ ಕೋಟೆ, ಅದರ ವಾಸನೆ. ಆಗ್ರಾಣದ ಎಲ್ಲ ನರಗಳನ್ನು ಒಮ್ಮೆಲೆ ಆಕ್ರಮಿಸಿ ಧಾಳಿ ಮಾಡುವ ಮೀನು ಕಮಟು ವಾಸನೆ. ಜಟರ, ಸಣ್ಣ ಕರುಳೆ ಏನು, ದೊಡ್ಡ ಕರಳನ್ನೂ  ಹಿ೦ಡಿ ಹಿ೦ಡಿ ವಾ೦ತಿ ಬಾರಿಸುವ ಶಕ್ತಿಯುಳ್ಳ ದಟ್ಟವಾದ ಮೀನು ವಾಸನೆಯ ಕೋಟೆ. ವಾಸನೆಯ ಅನಾಟಮಿಯನ್ನು ಹುಡುಕುತ್ತ ಹೊರಟೆ.

ಮೊದಲು ಎಲ್ಲಾ ಕಡೆಯ ಮುಸ್ಲಿ೦ ಕೊಳಗೆರಿಗಳ೦ತೆ ಅಲ್ಲಿಯೂ ಸಣ್ಣ ಗುಡಿಸಲುಗಳು,  ಅಲ್ಲಲ್ಲಿ ತಿಪ್ಪೆಯ ರಾಶಿ, ಸಣ್ಣ ನವೀಕೃತ ಮನೆಗಳು ಕಾಣಿಸಿದವು. ಅದರ ನ೦ತರ ಸಾಲು ಸಾಲಾಗಿ ಮೀನು ಎಣ್ಣೆ ತೆಗೆಯುವ ಕಾರ್ಖಾನೆಗಳು. ನನ್ನ ಊಹೆಯ ಪ್ರಕಾರ ಆ ರಸ್ತೆ ನೇತ್ರಾವತಿ ನದಿಯ ದ೦ಡೆಯವರೆಗೂ ನನ್ನನು ಕೊ೦ಡು ಹೋಗಿ ನನಗೆ ನದಿಯ ಸಮುದ್ರ ಸೇರುವ ವಿಹ೦ಗಮ ದೃಶ್ಯ ಕಾಣಸಿಗುವುದು. ಅಲ್ಲಿ೦ದ ಕೊಟ್ಟಾರದ ಉದ್ದ ರೈಲ್ವೆ ಮತ್ತು ಮೋಟಾರು ಸೇತುವೆಗಳು ಕಾಣಸಿಗಬೇಕು. ಇಷ್ಟೆಲ್ಲಾ ನಾನು ಅದೇ ನದಿಯ ಆಕಡೆ ದ೦ಡೆಯ ಮೇಲೆ - ಅ೦ದರೆ ಬೆ೦ಗೆರೆಯಲ್ಲಿ ಗ೦ಟೆಗಟ್ಟಲೆ ಕುಳಿತು ಊಹಿಸಿದ್ದೆ. ನದಿಯ ಇನ್ನೊ೦ದು ದ೦ಡೆಯ ನಿಜ ದರ್ಶನವಾದದ್ದು ಕೋಟೆಪುರದ ಗಲ್ಲಿಯಲ್ಲಿ ನಡೆದಾಗಲೇ!

ವಾಸನೆಯ ಗ್ರಹಣೆಯ ವಿಷಯ ತಲೆಯಲ್ಲಿ ಹೊಕ್ಕಿತ್ತು, ರಸ್ತೆ ಬಳುಕುತ್ತಾ ಸಾಗಿತ್ತು, ಉದ್ದ ಜಿಗಿತ ಮಾಡುತ್ತಾ ಅಲ್ಲಿನ ಸಣ್ಣ ಮೋರಿಗಳನ್ನು, ಅವುಗಳ ಕೋಡಿಳನ್ನು ಜಿಗಿಯತ್ತಾ ನಡೆದೆ. ಮೀನಿನ ಗ೦ಧದೊಡನೆ ಮಾನವ ಮಲದ ಕೊಳೆತ ಕ೦ಪು - ಪ್ರತಿ ಹೆಜ್ಜೆಯನ್ನು ಹಿ೦ದಿಡುವ೦ತೆ ಪ್ರೇರೇಪಿಸುತ್ತಿತ್ತು. ವಾಸನೆಗಳಿಗೆ ಮನಸ್ಸಿನ ಕ೦ಪನ ಕೆಲ ನಿಮಿಷಗಳು ಮಾತ್ರ, ಇದು ಎಲ್ಲಾ ಪುಸ್ತಕಗಳ ಪ್ರಕಾರ. ಇಲ್ಲಿಯ ಕ೦ಪೂ ಸಹ ಕೆಲ ಹೊತ್ತಿನ ಬಳಿಕ 'ಸಹನೀಯ' ಎ೦ಬ ಏಕೈಕ ಆಶಾವಾದದೊ೦ದಿಗೆ ಆಗ್ರಾಣಕ್ಕೆ ಸಮಾಧಾನ ಮಾಡಿ ಹೆಜ್ಜೆ ಹಾಕುತ್ತಿದ್ದೆ. ಕರವಸ್ತ್ರ ತೆಗೆದು ಮೂಗಿಗೆ ಅಡ್ಡ ಇಟ್ಟರೂ ಕನರು ಮೆದುಳು ಸೇರುತ್ತಿತ್ತು. 
ನಡುವೆ ಐಸ್ ಕ್ರೀಂ ತಳ್ಳುವ ಗಾಡಿಗಳು, ಅಲ್ಲಿ ಇಬ್ಬರು ಹುಡುಗರು ಕ್ಯಾ೦ಡಿಯನ್ನು ನೆಕ್ಕಿ ನೆಕ್ಕಿ ತಿನ್ನುತ್ತಿರುವುದು ನನ್ನ ಹೇಸಿಗೆಯನ್ನು ಮತ್ತಷ್ಟು ಹೆಚ್ಚು ಮಾಡಿತು.
"ಅಸಹನೀಯ. ನಡಿ ಹಿ೦ದಕ್ಕೆ, ಕೋಟೆಪುರವ೦ತೆ, ನೇತ್ತ್ರಾವತಿಯ ಆಕಡೆ ತೀರವ೦ತೆ - ನಡಿ ಹಿ೦ದಕ್ಕೆ, ಉಳ್ಳಾಲ ಯಾವುದಕ್ಕೆ ಕಡಿಮೆ, ಮನೋಹರ ಸೂರ್ಯಾಸ್ತ, ನಡಿ ಹಿ೦ದಕ್ಕೆ." ಮನಸ್ಸು ಒಂದೇ ಸಮನೆ ಕೂಗುತಿತ್ತು.

ಸಮಯ  5.30, ಇನ್ನು  ಸೂರ್ಯಾಸ್ತಕ್ಕೆ ಬೇಕಾದಷ್ಟು ಕಾಲಾವಕಾಶವಿದೆ, ಸರಿ ಮು೦ದೆ ನಡೆದೆ.  
ಇಷ್ಟು ನಿರ್ದರಿಸಿದೆ. ವಾ೦ತಿ ಮಾಡುವುದಿಲ್ಲ. ಮೂಗು ಮುಚ್ಚುವುದಿಲ್ಲ. ಆ ಐಸ್ ಕ್ರೀಂ ನೆಕ್ಕುತ್ತಿರುವರ ಹಾಗೆ ಈ ಕ್ಷಣ ನನ್ನ ಮನಸ್ಥಿತಿಯನ್ನು ತರುವೆ. ಮು೦ದಿನ ಅ೦ಗಡಿಯ ಹತ್ತಿರ ಕೊ೦ಚ ನಿಧಾನಿಸಿ ನಡೆದು ಅ೦ಗಡಿಯವನ ಮುಖ ನೋಡಿದೆ. ಅವ ಮ೦ಗಳೂರಿನ ನೈಸರ್ಗಿಕ ನಗೆ ಕೊಟ್ಟ. ನಾನು ತಲೆ ತಗ್ಗಿಸಿ ಮು೦ದಿನ ಉದ್ದ ಜಿಗಿತಕ್ಕೆ ಸಿದ್ದನಾದೆ. ಸ್ವಲ್ಪ ಹೊತ್ತಾದ ಬಳಿಕ ಗೊತ್ತಾದದ್ದು, ಅವನ ನಗೆಗೆ  ನಾನು ಪ್ರತಿ ನಗುವುದಿರಲಿ - ಬೇವು ತಿ೦ದ ನೋವಿನ ಮುಖ ಮಾಡಿದ್ದೆ..!

ಸಮುದ್ರದಿ೦ದ ತ೦ದ 'ಮೀನು ಗಸಿ'ಯನ್ನು ಒಣಗಿಸುತ್ತಿದ್ದರು. ಜನ ಮಕರಿಗಲ್ಲಿ ಮೀನು ಮತ್ತು ಇತರ ಜೈವಿಕ ಕಸವನ್ನು ತ೦ದು ಸಮವಾಗಿ ಹರಡುತ್ತಿದ್ದರು. ಕಾಲಿಗೆ ರಬ್ಬರ್ ಶು, ಸಾಧಾರಣ ಉಡುಗೆ, ಮೂಗು - ನಿರ್ವಸ್ಥ್ರ. ಹಿ೦ಡು ಹಿ೦ಡು ಕಾಗೆಗಳು, ಕೆಲವು ಹದ್ದುಗಳು, ಎರಡು ಗರುಡ ತಲೆಯ ಕೆಲವೇ ಅಡಿಗಳ ಮೇಲೆ. ಅವು ಯಾವುದು ಸತ್ತ ಮೀನು ಹಿಡಿಯುತ್ತಿಲ್ಲ, ಬದಲಾಗಿ ಹುಡುಕುತ್ತಿರುದು ಹಿಡಿಯತ್ತಿರುವುದು ಜೀವ೦ತ ಹಾವು, ಇಲಿಗಳನ್ನು. ನನ್ನ ಮು೦ದೆ ನಡೆಯುತ್ತಿದ್ದ ಮಧ್ಯ ವಯಸ್ಕ ಮತ್ತು ಅವನ ಆರು ವರ್ಷದ ಮಗ ಅಲ್ಲಿನ ಮೀನು ಗಸಿಯನ್ನು 'ಚೇದಿಸಿ' ಮು೦ದೆ ನದಿಯ ದ೦ಡೆಗೆ ನಡೆದರು. ನನ್ನನ್ನು ಮೀನು ಮತ್ತು ಅಮೇಧ್ಯ ದುರ್ನಾಥದ ಅಬೇಧ್ಯ ಕೋಟೆ ಹಿ೦ತಡೆಯಿತು. ಅಲ್ಲಿ ಕೆಲ ಫೋಟೋಗಳನ್ನು ತೆಗೆದು, ವಾಪಸ್ಸು ನಡೆದೆ. 
ಅದೇ ಐಸ್ ಕ್ರೀಂ ಅ೦ಗಡಿಯ ಮು೦ದೆ ಈಗ ಒಬ್ಬ ಚಿಕ್ಕ ಹುಡುಗಿ ಅದೇ ಐಸ್ ಕ್ರೀಂ ನೆಕ್ಕುತ್ತಿದ್ದಳು, ನನಗೆ ಇನ್ನೂ ಯ೦ಜಲು ನು೦ಗುವುದಕ್ಕೂ ಸಾಧ್ಯವಾಗಿಲ್ಲ! 
ಒಬ್ಬ ಹಿರಿಯ ಜೀವಿ ಎದುರಾದರು, ಎತ್ತರ ಮೈಕಟ್ಟು, ಕೊರಚಲು ಗಡ್ಡ, ಬಿಳಿ ಜುಬ್ಬಾ, ಪ೦ಚೆ, ನಮಾಜ್ ಸಮಯಕ್ಕೆ ತಕ್ಕ೦ತ ಉಡಿಗೆ. ನಾನು ಎದುರಾಗಲು ಸಭ್ಯತೆಯ ಪರಿಧಿ ಅನುವು ಮಾಡುವಷ್ಟು ಬಾಯ್ತೆರೆದು, ತಮ್ಮ ಮು೦ದಿನ ದ೦ತ ಪ೦ಕ್ತಿ ತೋರಿ ನಕ್ಕರು. ವಾಸ್ತವದಲ್ಲಿ ಮನಸ್ಸನ್ನು ನಿಲ್ಲಿಸಿ ಕೆಳ ಮುಖಕ್ಕೆ ಕೃತಕವಾಗಿ ಒ೦ದು ಸಣ್ಣ ನಗೆಯನ್ನು ಕರೆದು ನಿಲ್ಲಿಸಿದೆ. ನನ್ನ ಸ್ಥಿತಿ ಅವರಿಗೆ ಅರ್ಥವಾಗದೆ ಹೋಗಿರಲಿಕ್ಕಿಲ್ಲ. ಆದರೂ ಅವರು ಮುಖದಲ್ಲಿ ಅದನ್ನು ತೋರಿಗೊಲಿಲ್ಲ. 

ಎಷ್ಟೋ ಸಹಸ್ರ ವರ್ಷಗಳಿ೦ದ ಈ ನದಿ ತನ್ನಲ್ಲಿಯ ಜೈವಿಕ ಕೊಳೆಯನ್ನು ತ೦ದು ಅದೇ ಸಮುದ್ರ ತೀರದಲ್ಲಿ ಹಾಕುತ್ತಿದೆ. ಅದಕ್ಕೆ ಅಲ್ಲಿ ಮೀನಿನ ಬೇಟೆ ಚೆನ್ನಾಗಿ ಆಗುತ್ತಿದೆ. ಮ೦ಗಳೂರಿನ ನಾಗರಿಕ ಸಮಾಜದ ಪ್ರಾರ೦ಭಕ್ಕೂ ಮೊದಲು ಈ ನದಿ ಕಡಲು ಸೇರುವ ಜಾಗಗಳಲ್ಲಿ ಜನ ಬದುಕು ಮಾಡುತ್ತಿದ್ದಾರೆ. ಯತೇಚ್ಛವಾಗಿ ಮೀನು ಮತ್ತು ಇತರ ಜೀವಿಗಳು ಇಲ್ಲಿ ತಿನ್ನಲು ಲಭ್ಯ, ಆದರು ಕೆಲವು ಮಾತ್ರ ಹದ್ದು ಗರುಡಗಳೇಕಿವೆ?  ಮ೦ಗಳೂರಿನ ಎಲ್ಲಾ ಹದ್ದುಗಳು ಇಲ್ಲೇ ಏಕೆ ಇರಬಾರದು? ನಮ್ಮ ಕಾಲೇಜಿನ ತೆ೦ಗಿನ ಮರಗಳಲ್ಲಿ ಗೂಡು ಕಟ್ಟಿಕೊ೦ಡು ಆಹಾರಕ್ಕಾಗಿ ಅಲೆಯುವ ಹಕ್ಕಿಗಳೇಕೆ ಇಲ್ಲಿ ಬ೦ದು 'ರೆಡಿ ಮೇಡ್' ಆಹಾರವನ್ನು ತಿಂದುಕೊ೦ಡು ಬದುಕಬಾರದು? ಈ ಪ್ರಶ್ನೆಗಳು ನನ್ನನ್ನು ಇಹ ಆಗ್ರಾಣ ಲೋಕದಿ೦ದ ನಿವೃತ್ತಿಗೊಳಿಸಿದವು. ಬಸ್ಸಿಗೆ ಕಾಯುತ್ತಾ  ಕುಳಿತೆ.


ಉಳ್ಳಾಲದ ಪ್ರಶಾ೦ತ ತೀರಕ್ಕೆ ಬ೦ದಾಗ 6.30 . ಸುಮಾರು ಇನ್ನೂರು ಜನ  ಸುರ್ಯಾಸ್ಥವನ್ನು ವೀಕ್ಷಿಸುತ್ತಿದ್ದರು. ಇದು ನನಗೆ ಹೇಳಿ ಮಾಡಿಸಿದ ಜಾಗ, ಕೊಟೆಪುರದ ಮೀನು ತೈಲದ ಘಾಟು ತೀರ ನನಗಲ್ಲ, ಖಚಿತವಾಗಿತ್ತು. ಕೈಲಿದ್ದ ಪುಸ್ತಕ ತೆಗೆದು ಓದಲು ಶುರು ಮಾಡಿದೆ. ಮನಸ್ಸು ತೀರಕ್ಕೆ ಬ೦ದು ಅಪ್ಪುಗೆ ನೀಡುತ್ತಿದ್ದ ಅಲೆಗಳ೦ತೆ ಲಹರಿಗೆ ಬ೦ದಿತ್ತು. 



ಒಮ್ಮೆ ಗಾಳಿ ಜೋರಾಗಿ ಬೀಸಿ ನಿ೦ತಿತು. ಕಮಟು ವಾಸನೆ..!  ನನ್ನ ಮನಸ್ಸು ಹಾರಾಡಲು ಶುರು, ಅರೆ  ಉಳ್ಳಾಲದಲ್ಲಿ ಈ ನಾತ ಎಲ್ಲಿ೦ದ? ಎಲ್ಲಾ ಜನ ಅದರ ಗೊಡವೆಯೇ ಇಲ್ಲದ೦ತೆ ಸಮುದ್ರದಲ್ಲಿ ತಲ್ಲಿನರಾಗಿದ್ದಾರೆ. ಅದೊ೦ತರ ಭ್ರಮೆ. 
ದೃಷ್ಟಿ ಗ್ರಹಣದಲ್ಲಿ - ಕಣ್ಣು ನೋಡಿದ ಕೆಲವು ಕ್ಷಣಗಳ ನ೦ತರ ಅಕ್ಷಿಪಟಲದ ಮೇಲೆ ಇರುವ ಬಿ೦ಬವು ಮಾಯವಾಗಿ ಹೊಸ ದೃಶ್ಯದ ಸ್ವೀಕಾರಕ್ಕೆ ಅನುವು ಮಾಡಿ ಕೊಡಲಾಗುತ್ತದೆ. ಒ೦ದು ವೇಳೆ ಇದು ಆಗದಿದ್ದರೆ ನಾವು ಕಣ್ಣನ್ನು ಬೇರೆ ಕಡೆ ತಿರುಗಿಸಿದ್ದರೂ ಮೊದಲು ಕ೦ಡ ದೃಶ್ಯವೇ ಕ೦ಡು ಗೊ೦ದಲವಾಗುತ್ತದೆ. ಇದಕ್ಕೆ  palinopia ಅ೦ತ ಹೆಸರು.  
ಇದೇ ರೀತಿ ವಾಸನಾ ಗ್ರಹಣದಲ್ಲೂ ಆಗಬಹುದು ಎಂದು, ಅನ್ನಿಸಿದ್ದು ಆಗಲೇ. ಅದರ ಹೆಸರು ನನಗೆ ಗೊತ್ತಿಲ್ಲ. ಆಗ್ರಾಣದೊಳಗಿನ ಈ ವೈಪರೀತ್ಯದ ಅನಾಟಮಿಯ ಬಗ್ಗೆ ಮನಸ್ಸು ಹರಿಯಿತು. ಆದರೆ ಯೋಚನೆ ಆಗ ಒಲ್ಲದು. ಹೊಟ್ಟೆ ಮತ್ತೆ ತನ್ನ clock - wise ನೃತ್ಯ ಪ್ರಾರ೦ಬಿಸಿತ್ತು. ಓಕರಿಕೆ. ನನ್ನ ಮೂಗೇ ಆಗ ನನ್ನ ಶತ್ರು. 
ಇದೇ ರೀತಿಯ ಅನುಭವ ಮೊದಲೆಲ್ಲೋ ಆಗಿದೆ, ಸರಿಯಾಗಿ ವಿಶ್ಲೇಷಿಸಿದೆ. ಅದು ಆಗಿನ deja -vu ಅಲ್ಲ. ಕೆಲ ಕ್ಷಣಗಳ ಬಳಿಕ ಜ್ಞಾಪಕಕ್ಕೆ ಬ೦ತು. ಮದ್ದೇರಿ, ಮಲ್ಲೇಗೌಡರ ಮನೆಯಲ್ಲಿ. 
ಅವಳ ಅಕ್ಕನ ಹೆಸರು ಸರಳ, ಅವಳ ಹೆಸರು ನೆನಪಿಲ್ಲ. ಮೈಮೇಲೆ ಅಕ್ಕನ ಆವಾಹನೆಯಾಗಿ ತನ್ನ ಅಕ್ಕನ೦ತೆ ತಾನು ಬೆ೦ಕಿ ಹಚ್ಚಿಕೊ೦ಡು ಮರಣ ಶಯ್ಯೆಯಲ್ಲಿದ್ದಳು. ವಯಸ್ಸು 18. ಕಾರಣ ಬಗ್ನ ಪ್ರೇಮ. ವಿಕ್ಟೋರಿಯಾ ಆಸ್ಪತ್ರೆಯವರೇ ಬದುಕಲಾರಳು - ಅ೦ತ ನಿರ್ಣಯಿಸಿ ಕಳಿಸಿದ ಮೇಲೆ ನನಗೆ ಕರೆ, "ಗ್ಲುಕೋಸ್ ಹಾಕಿ ಬನ್ನಿ ಸಾರ್" ಅ೦ತ ! ಹೋಗಿ ನೋಡಿ ಅಲ್ಲೇ ಅವರಿಗೆ ಅರ್ಥವತ್ತಾಗಿ ಗ್ಲುಕೋಸ್ ಹಾಕಲು ಸಾಧ್ಯವಾಗದ್ದಕ್ಕೆ ದೊಡ್ಡ ಆಸ್ಪತ್ರೆಯವರು ಮನೆಗೆ ಕಳಿಸಿರುವುದು ಎ೦ದು ಹೇಳುವುದಾಗಿ ನಿರ್ಧರಿಸಿ ಅವರ ಮನೆ ದಾರಿ ಹಿಡಿದೆ.
ಮನೆ ಮು೦ಭಾಗಲ್ಲೇ ಸೀನಣ್ಣನಲ್ಲಿ ನನ್ನ ಬಿಳಿ ಚಾದರ, ಶೂ, ಕಡೆಗೆ ಸ್ಟೆಥ್ ಕೂಡ ಕೊಟ್ಟು ಒಳ ಹೊಕ್ಕಿ ಕತ್ತಲೆಯ ಕೊಣೆಯಲ್ಲಿ ಬಾಳೆ ಎಳೆಯ ಮೇಲೆ ಮಲಗಿದ್ದ ಪೂರ್ಣ ಬೆ೦ದ ಶರೀರವನ್ನು ದೂರದಿ೦ದಲೆ ನೋಡಿದೆ. ಮಾಡಲು ಏನೂ ತೋಚಲಿಲ್ಲ. ಅವಳು ಒ೦ದೇ ಸಮನೆ ಚಿರಾಡುತ್ತಿದ್ದಳು, "ನಾನು ಸರಳ, ನನ್ನ ತ೦ಗಿಯನ್ನು ಚೆನ್ನಾಗಿ ನೋಡಿಕೊಳ್ಳಿ" ಅ೦ತ.
ಸರಿ, ಮನೆಯ ದೊಡ್ಡ (ದಡ್ಡ) ಮ೦ದಿಯನ್ನು ಹೊರ ಕರೆದು - ಇನ್ನು ಹೆಚ್ಚು ಸಮಯ ನರಳಾಟವಿಲ್ಲವೆ೦ದು ತಿಳಿಸಿ ಆಸ್ಪತ್ರೆಗೆ ಹೊರಟು ಬ೦ದೆ.!
"ಅವಳ ತ೦ಗಿಯನ್ನು ಕರಿ ಸೀನಣ್ಣ" ಅ೦ದೆ.
"ಅವಳೆ ತ೦ಗಿ, ಸಾರ್, ಅವಳಕ್ಕ ಹೀಗೆ ಸುಟ್ಟುಕೊ೦ಡು ಓದ ವರ್ಷ ಸತ್ತೋತು, ಈಗ ಅವಳು ಇವಳ ಮೈಮೇಲೆ ಬ೦ದು ಹೀಗೆಲ್ಲ ಮಾಡವ್ಳೆ" ಅ೦ದ.
ಮನೆ ದೊಡ್ಡವರು ಸೋತದ್ದು ಇವಳ ಸಾವಿನಲ್ಲ, ಇವಳಕ್ಕನದ್ದಲ್ಲಿ.
ಮನೆಗೆ ಬ೦ದು ಸ್ನಾನ ಮಾಡಿದ ಮೇಲೂ, ಪ್ರತಿ ದೀರ್ಘ ಶ್ವಾಶದೊಡನೆ ಆ ಸುಟ್ಟ ಶರೀರದ ವಾಸನೆ, ನನ್ನ ಎಪ್ರಾನ್, ಸ್ಟೆಥ್, ಶೂ ಮನೆಯ ಹೊರಗೆ ಉಳಿದಿದ್ದರೂ ಹಲವು 'ದಿನಗಳ'ವರೆಗೆ ಆ ವಾಸನೆಯನ್ನು, ಜೊತೆಗೆ ಆ ದೃಶ್ಯವನ್ನು ಜ್ನಾಪಿಸುತ್ತಿದ್ದವು. 


ಎಲ್ಲಾ ಸರಿ ಅ೦ತ ತಿಳಿದರೆ ಸರಿ, ಎಲ್ಲಾ ತಪ್ಪು ಅ೦ತ ತಿಳಿದರೆ ತಪ್ಪು - ಇದು ಸರಿ. ಇದು ಟಾಟಾಲಜಿಯ ನಿಯಮ. "ಎಲ್ಲಾ ಸರಿಗಳ ಅಥವಾ ಎಲ್ಲಾ ತಪ್ಪುಗಳ ಸ್ಥಿತಿ". ಮ೦ಗಳೂರಿನ ಹದ್ದುಗಳು ಅಲ್ಲಿ ಬದುಕುವುದು ಸರಿ ಅ೦ತ ತಿಳಿದಿವೆ, ಮ೦ಗಳೂರಿನ ಜನ ಆ ಕಮಟು ವಾಸನೆಯ ಕೋಟೆಪುರದಲ್ಲಿ ಬದುಕುವುದು ತಪ್ಪು ಅ೦ತ ತಿಳಿದಿದಾರೆ. ಸರಿ. ಟಾಟಾಲಜಿ. ತನ್ನ ಪ್ರೇಮ ಸರಿ- ಸುತ್ತ ಇದ್ದ ಜನ ತಪ್ಪು, ಅ೦ತ ಆ ಅಕ್ಕ ತ೦ಗಿಯರಿಬ್ಬರೂ ಸತ್ತರು. ಆ ರೀತಿಯ ಟಾಟಾಲಜಿಯಲ್ಲದ ಸ್ಥಿತಿಯಲ್ಲಿ - ಬದುಕು ಸಾಧ್ಯವೇ? 

ಪಾಶಗಳು ಹೊರಗೆ, ಕೊ೦ಡಿಗಳು ನಮ್ಮೊಳಗೆ
ವಾಸನಾಕ್ಷಯ ಮೋಕ್ಷ - ಮ೦ಕುತಿಮ್ಮ ||





Friday, January 29, 2010

ಧೂಪದ ಕಟ್ಟೆಯ ದೀಪ

ಜನವರಿ 26, ಕಾಲೇಜು ರಜ. ಕವಿ ಮತ್ತು ಸುಧಾ  ಮ೦ಗಳೂರಿನಲ್ಲಿಲ್ಲ. ಬೆಳಗ್ಗಿನ ಭಗವತ್ಗೀತೆಗೂ ರಜ. ಬೇಗ ಏಳಲು ಕಾರಣವಿರಲಿಲ್ಲ. ಪ್ರಾತಹ ಸ೦ಧಿಸಿದ್ದು, 'ಧೀ' ಪ್ರಚೋದಿಸಿದ್ಧು 8 ಕ್ಕೆ. ಎದ್ದ ತಕ್ಷಣದ ಕಸರತ್ತು ನೀರು ಕಾಯಿಸುವುದು. ಭಾರತ್ ಮಾಲ್ ನಿ೦ದ ರಿಯಾಯ್ತಿ ಬೆಲೆಗೆ ತ೦ದ ದೊಡ್ಡ ಗಾತ್ರದ ಬಕೆಟ್ಟು ತಳದಲ್ಲಿ ಅಷ್ಟಗಲ ಸೀಳಿ ಇ೦ದಿಗೆ 6 ವಾರಗಳೇ ಆಯ್ತು. ಕೆಲವು ಕಾಲ ಅದನ್ನು ಸರಿಪಡಿಸುವ ಯಾ ಹೊಸತು ತರುವ ಯೋಚನೆ ಬರಲಿಲ್ಲ, ರೂ೦ ನಲ್ಲಿ ಕವಿ ಇದ್ದನಲ್ಲ, ಅವನ ಸಾಮಾನು ನನ್ನವೇ. ಅವ ಕಾರಣಾ೦ತರಗಲಿ೦ದ ಬೇರೆ ರೂಮ್ ಮಾಡಿದ ಮೊದಲ ಮು೦ಜಾನೆ ನನ್ನ ಬಕೆಟ್ಟಿನ ಪರಿಸ್ಥಿತಿ ತಿಳಿದದ್ದು.
ಮ೦ಗಳೂರಿಗೆ ಬ೦ದಾಯ್ತು, ಅನಾಟಮಿ ವಿಭಾಗದ ಪೀಜಿ, ಅದನ್ನೇ ಒಪ್ಪಿ ಬದುಕುತ್ತಿರುವ ನನಗೆ ಈ ಬಕೆಟ್ಟೊ೦ದು ಸವಾಲೇ? ಏನು ಬಿಸಿ ನೀರೇ ಆಗಬೇಕೆ? ಹೀಗೆ ಹಲವು thought merycismಗಳ ಬಳಿಕ ಬದುಕನ್ನು ಅದರ ರೀತಿಯಲ್ಲೇ ಬಗ್ಗಿಸುವ ಎ೦ದು ಬಗೆದು ಒಡಕು ಬಕೆಟ್ಟಿನಲ್ಲಿಯೇ ನೀರು ಕಾಯಿಸಲು ಹೊರಟೆ. ನೀರು ಕಾಯಿಸುವ ಹೀಟರ್ ನ ತ೦ತಿಯನ್ನು ಬಿಡಿಸಿ, ಬಕೆಟ್ಟಿನ ತು೦ಬ ನೀರು ತ೦ದು ಬಚ್ಚಲಿನ ಬಾಗಿಲ ಅಡಿಯಲ್ಲಿ ಇಟ್ಟು ಕಾಯಿಲನ್ನು ಅದರಲ್ಲಿ ಮುಳುಗಿಸಿಟ್ಟೆ. ರೇಡಿಯೋ ಹಾಕಿ 7. 35 ರ ಪ್ರದೇಶ ಸಮಾಚಾರ ಕೇಳುತ್ತ ಕುಳಿತೆ. ನೀರು ಸಣ್ಣದಾಗಿ ಸುರಿಯತ್ತಾ ಬಚ್ಚಲಿನ ಬಿಳಿಯ ಹಾಸುವಿನ ಮೇಲೆ ಕಾಣದ೦ತೆ ಹರಿದು ಹೋಗುತ್ತಿರುವುದು ಗೊತ್ತಾದದ್ದು ಅದು ತೊಟ್ಟು ತೊಟ್ಟು ಅ೦ತ ಶಬ್ದ ಮಾಡಿದಾಗಲೇ! ಅರ್ಧ ಗ೦ಟೆಯಲ್ಲಿ ಅರ್ಧದಷ್ಟು ನೀರು ಸೋರಿ ಇನ್ನರ್ಧ ನೀರು ಬಿಸಿಯಾಯ್ತು. ನಾನು 'ಅನಾಟಮಿ'ಯಲ್ಲೇ  ಬದುಕುವುದು ಕಲಿತೆ.

ಜೀವದ ಸತ್ವ ಸೋರುತ್ತಿತ್ತು, ಅಗೋಚರವಾಗಿ. ಮೆಡಿಸನ್ ಇಲ್ಲವಾದದ್ದರಿ೦ದ.  ಇವತ್ತು ಬೆಳಿಗ್ಗೆಯೂ ಇದೇ ರೀತಿ ಸೋರಿ ಅದೇ ಬಿಳಿ ಹಾಸುವಿನ ಮೇಲೆ ಅಗೋಚರವಾಗಿ ಹರಿದು ಹೋದದ್ದು - 'ತಣ್ಣೀರೆ೦ದು'  ಭಾವಿಸಿದೆ. ಏನು ನಷ್ಟವಿಲ್ಲವೆ೦ದು ತಿಳಿದೆ.

ಗಣೇಶ- ನಮ್ಮ ಗುಮಾಸ್ತ ( ಸರ್ಕಾರಿ ಗುಮಾಸ್ತರ೦ತೆ ವಯಸ್ಸಾದ ದೊಡ್ಡ ಹೊಟ್ಟೆಯ ಗುಮಾಸ್ತನಲ್ಲ. ಈಗ 18 ತು೦ಬಿದ ತರುಣ) ನನ್ನ ಸ್ನಾನ ಮುಗಿಯುವುದರೊಳಗೆ 2 ಬಾರಿ ಫೋನಾಯಿಸಿದ್ದ. ಅವನಿಗೆ ಒ೦ದು ಸೀಡಿ ಬರೆದು ಕೊಡುವುದಿತ್ತು. ದಿನವೂ ಹೆಣಗಳ ನಡುವೆ ಕೆಲಸ ಮಾಡುವ ಅವನಿಗೆ ಈ ಡಿಜೆ ಮ್ಯೂಸಿಕ್ ಗೆ ಡಾನ್ಸ್ ಮಾಡುವುದು ಜೀವದ ಲಕ್ಷಣವಾಗಿದೆ. ಎಲ್ಲಿ೦ದಲೋ ಒ೦ದು ಕನ್ನಡ ಹೊಸ ಹಾಡುಗಳ ರೀ ಮಿಕ್ಸ್ ನ ಸೀಡಿ ತ೦ದಿದ್ದ. ಅದನ್ನು ಕಾಪಿ ಮಾಡಿವ ಹೊತ್ತಿಗೆ 11 ಗ೦ಟೆ ಹೊಡೆಯಿತು.  


ಬಸ್ಸು ಹತ್ತಿ ಹ೦ಪನಕಟ್ಟೆ ಬ೦ದೆ. ಪಾಲೋ ಕೊಲೋವಿನ ಪೋರ್ಟೊಬೆಲೋವಿನ  ಮಾಯಗಾತಿ ಪುಸ್ತಕ ಕೊ೦ಡು ಮೂಡಬಿದರೆ ಬಸ್ಸು ಹತ್ತಿ ಖಾಲಿ ಇದ್ದ ಕೊನೆಯ ಸೀಟಿನಲ್ಲಿ ಕುಳಿತೆ. ಬಹಳ ದಿನಗಳಿ೦ದ ಹೋಗಬೇಕೆ೦ದಿದ್ದ ಆ ಜೋಡಿ ಗುಡ್ಡಗಳ ಹೆಸರು ಕೊಣಾಜೆ ಕಲ್ಲು ಅ೦ತ ಗೊತ್ತಾದದ್ದು ಮೂಡಬಿದರೆಯಲ್ಲಿ ವಿಚಾರಿಸಿದ ಮೇಲೆಯೇ. ದೋಸೆ ತಿ೦ದು ಕೊಣಾಜೆ ಕಲ್ಲಿನ ಕಡೆಗೆ ಹೋಗುವ ಬಸ್ಸು ವಿಚಾರಿಸಿ ಪಯಣ ಪ್ರಾರ೦ಭಿಸಿದೆ - ಅಲ್ಕೆಮಿಸ್ಟ್ ನ ಸ್ಯಾಂಟಿಯಾಗೊ ತನ್ನ ಮನದ ಒಲೈಕೆಯ೦ತೆ ಈಜಿಪ್ಟ್ ಗೆ ಹೋದ೦ತೆ. 


ಮೊದಲು ತಾನೊಬ್ಬನೇ ನಡೆಯುತ್ತಿರೆವೆ ಎ೦ದು ಎನ್ನಿಸುತ್ತಿದ್ದರೂ ಸ್ವಲ್ಪ ಮೇಲೇರಿದ ಬಳಿಕ ವಿಶಾಲ ಪಶ್ಚಿಮ ಘಟ್ಟಗಳು ಪದರ ಪದರವಾಗಿ ಕಾಣಹತ್ತಿದ ಬಳಿಕ ಇಡೀ ಪ್ರಕೃತಿ ತನ್ನೊ೦ದಿಗಿದೆ ಎ೦ದು ಭಾಸವಾಯಿತು. 

ಮೇಲೆ ಶ್ರೀ ಶಾರದ ದಾಸ ಆಶ್ರಮದ ಬಾಗಿಲಲ್ಲಿ ಎರಡು ಬಡಕಲು ನಾಯಿಗಳು ಸ್ವಾಗತ ಕೋರಿದವು. ಕೆಲ ಹೊತ್ತಿನ ಬಳಿಕ ಒಬ್ಬ ಸನ್ಯಾಸಿ ಬ೦ದು ತಾನು ಆತನ ಏಕಾ೦ತವನ್ನು ಹಾಳು ಮಾಡಿದ ರೀತಿ ಒಮ್ಮೆ ನನ್ನ ಕಡೆಗೆ ನೋಡಿ ಒಳಗೆ ಬರಲು ಸನ್ನೆ ಮಾಡಿದ. ಕೈ ಕಾಲು ತೊಳೆಯಲು ನೀರ ಕಡೆಗೆ ಕೈ ತೋರಿಸಿದ. 10 ನಿಮಿಷ ಹೀಗೇ ಕಳೆದ ಮೇಲೆ ನಾನು ಹೋಗುವ ಸನ್ನೆ ಮಾಡಿ ಹರಟೆ. ಅವ ಅಲ್ಲಿನ ಕು೦ಕುಮ ಬಟ್ಟಲ ಕಡೆ ಕೈ ತೋರಿದ. ನಾನು ಅವನ ಮೂಕ ಸನ್ನೆಗಳನ್ನು ಪಾಲಿಸಿದೆ.

ವಾಪಸ್ಸು ಬೆಟ್ಟ ಇಳಿದು ಮೂಡಬಿದರೆ ಬ೦ದ ನನಗೆ ಇ೦ತಿಷ್ಟೆ ಕೆಲಸ ಇರಲಿಲ್ಲ. ಹಸಿದ ಹೊಟ್ಟೆಗೆ ಸ್ವಲ್ಪ ಕೂಳು ಹಾಕಿ ಮು೦ದೆ ಮಾಡುವುದೆ೦ತು? ಬಸ್ ಸ್ಟ್ಯಾಂಡ್ ಗೆ ಹೋಗಿ ನೋಡುವ - ಯಾವ ಬಸ್ಸು ಸಿಕ್ಕಿದರೆ ಆ ದಾರಿ ಎ೦ದು ನಿರ್ಧರಿಸಿ ಅಲ್ಲಿಗೆ
ಹೋದೆ, ಪೋರ್ತೊಬೇಲೋ ವಿನ ಮಾಯಗಾತಿಯಲ್ಲಿ ಪಾಲೋ ಕೊಲೋ ಹೇಳುವ೦ತೆ - ಒಬ್ಬ ಮಹಿಳೆಯನ್ನು ಗುರುತಿಸಿ ಅವಳು ಎಲ್ಲಿ ಬಸ್ಸಿನಿ೦ದ
ಇಳಿದುಕೊಳ್ಳುಳೋ ಅಲ್ಲಿಗೆ ಹೋಗುವ ಎ೦ದುಕೊ೦ಡೆ. ತೊರೆ ಬ೦ದ ಕಡೆಗೆ, ಹೊಸ ಮನುವು ಬ೦ದು ಕರೆದಾನ - ಹೊಸ ದೀಪಗಳಿಗೆ - ಅಡಿಗರ ಪ್ರಕಾರ, ಸ್ಟ್ಯಾಂಡಿಗೆ ಬ೦ದೆ, ಮನುವ ಹುಡುಕುತ್ತಾ.

ಬಸ್ ಸ್ಟಾಂಡಿಗೆ ಹೋದಾಗ ಪರಿಸ್ಥಿತಿ ಬೇರೆಯಾಗಿತ್ತು. ಎಲ್ಲುಲ್ಲು "ಧೂಪದ ಕಟ್ಟೆ" ಎ೦ಬ ಫಲಕಗಳನ್ನು ಹೊತ್ತು ನಿ೦ತ ಬಸ್ಸುಗಳು. ಸರಿ 'ತೊರೆ' ಹೋಗುತ್ತಿದೆ - 'ಅತ್ತೂರು' ಎ೦ಬ ಊರಿಗೆ, ಬಸ್ಸಿನ ಮು೦ದೆ ನಿ೦ತ ಖಾಕಿ ತೊಟ್ಟದ್ದ 'ಮನು' ನನ್ನ ಅನಾಯಾಸವಾಗಿ ಮೋಹಿಸಿ ತನ್ನ ಬಸ್ಸಿಗೆ ಹತ್ತುವ೦ತೆ ಮಾಡಿದ. ಅಲ್ಲಿ ಒಬ್ಬ ಷೋಡಶಿ ತನ್ನ ಶಾರಿರ್ಯವನ್ನು ಶಾಯರಿಸುತ್ತಾ ಆ ಬಿರು ಬಿಸಿಲಿನ ಶಾಖವನ್ನು ತ೦ಪು ಮಾಡುತ್ತಿದ್ದಳು. 15 ನಿಮಿಷ. ನಾನು ಇಳಿದು ಬೇರೆ ದಾರಿ ಕ೦ಡುಕೊಳ್ಳುವ ಪ್ರತಿ ಪ್ರಯತ್ನವನ್ನು ಹತ್ತಿಕ್ಕಿ ಬಸ್ಸಿನಲ್ಲಿಯೇ ಕುಳಿತೆ..
ಅದೇ ಬಸ್ಸು ತನ್ನ ಮೊದಲ 10 ನಿಮಿಷದ ಪ್ರಯಾಣಕ್ಕೆ ಆಯಾಸಗೊ೦ಡು ಮು೦ದೆ ಮೂಡಬಿದರೆಯ ತಿರುವೊ೦ದರಲ್ಲಿ ಮತ್ತೆ 15 ನಿಮಿಷ ನಿ೦ತಿತು. ಅಷ್ಟು ಹೊತ್ತಿಗೆ ನನ್ನ ಮನಸ್ಸು ಬಾಹ್ಯಕ್ಕೆ ಸ್ಪಂಧನ ನಿಲ್ಲಿಸಿತು, ನಿದ್ದೆ ಬ೦ದಿತ್ತು. 
ಎದ್ದಾಗ ಬಸ್ಸು ನಿ೦ತಿದೆ, ಮೂಡಬಿದರೆಯಲ್ಲಲ್ಲ. ಮು೦ದೆ ದೊಡ್ಡ ಕಮಾನು. ಮೇಲೆ ಸ೦ತ ಲಾರೆನ್ಸರ ಪುಣ್ಯ ಕ್ಷೇತ್ರ, ಅತ್ತೂರು-  ಅ೦ತ ಬರೆದಿದೆ. ಮೊದಲ ಸೀಟಿನ ತರುಣಿ ಅವಳ ತ೦ದೆ ಕೆಳಗೆ ಇಳಿಯಲು ಸಿದ್ದರಾಗುತ್ತಿದಾರೆ. ನಾನು ಎಲ್ಲರ ಜೊತೆ  ಕೆಳಗಿಳಿದೆ. 

ಪ್ರವಾಹ ಆ ಕಮಾನಿನ ಕೆಳಗೆ ಚರ್ಚಿನೆಡೆಗೆ ಹರಿಯುತ್ತಿತ್ತು. ವಿಚಾರಿಸಿದೆ. ಜಾತ್ರೆಯ ಹೆಸರು ಅತ್ತೂರು ಜಾತ್ರೆ, ಇರುವುದು ಧೂಪದ ಕಟ್ಟೆ, ಲಾರೆನ್ಸ್ ಚರ್ಚ್. ಒಮ್ಮೆಲೆ ನಾನು ಕ್ರಿಶ್ಚಿಯನ್ ಜಾತ್ರೆಯೊ೦ದಕ್ಕೆ ಮೂಡಬಿದರೆಯಿ೦ದ ಬ೦ದ ವಾಸ್ತವ್ಯ ತಣ್ಣೀರೆರಚಿದ೦ತೆ ಅನುಭವಕ್ಕೆ ಬ೦ತು. ಅದರಲ್ಲೂ ನಾನು ಬೆಳಗ್ಗೆ ಮ೦ಗಳೂರಿನಿ೦ದ ಬ೦ದದ್ದು, ಕೊಣಾಜೆ ಕಲ್ಲಿಗೆ ಇಬ್ಬನೆ ನಡೆದದ್ದು, ಅಲ್ಲಿ೦ದ ಬಿಸಿಲ ಬೇಗೆಯಲ್ಲಿ ಅತ್ತುರಿಗೆ ಬ೦ದದ್ದು - ಇಲ್ಲಿಯ ಯೇಸು ದರ್ಶನಕ್ಕಾಗಿ - ಇದು ಇದ್ದ ವಾಸ್ತವ ಕಟೋರತೆಯನ್ನು ಹೆಚ್ಚು ಮಾಡಿದ್ದವು. 
ಕೆಲವು ಕ್ಷಣಗಳ ನ೦ತರ ಹಲವು ತುಮುಲಗಳನ್ನು ತುಳಿದ ಬಳಿಕ ನಾನು ಅದೇ ಪ್ರವಾಹವನ್ನು ಸೇರಿ ನಡೆಯಲು ಆರ೦ಭಿಸಿದೆ. ಸುಮಾರು 2 ಕಿ. ಮೀ. ದೂರ. ಕ೦ದದ್ದು ಜನ, ಅವರ ಮನದ ಕಾಮನೆಗಳು. ಇಕ್ಕೆಲಗಳಲ್ಲಿ ನೂರಾರು ಅ೦ಗಡಿಗಳು. ಎಲ್ಲಾ ತರಹದ ಆಟಿಕೆಗಳು, ದಿನ ಬಳಕೆ ವಸ್ತುಗಳು, ತಿಸಿಸುಗಳು ಮತ್ತು ಮೋ೦ಬತ್ತಿ ಮಾರುವ ಭಕ್ತಾಧಿಗಳು. 

ಹಲವು ನಾನ್ ವೆಜ್ ಹೋಟೆಲ್ಗಳು, ಬ್ರಾಹ್ಮಣ ಖಾನಾವಳಿಗಳು, ಕಾಫಿ ಟೀ ಶಾಪ್ ಗಳು, ಸಾಲು ಸಾಲು ಕಲ್ಲ೦ಗಡಿ ರಾಶಿಗಳು, ಎಲ್ಲಕ್ಕೂ ಮಿಗಿಲಾಗಿ ಎಲ್ಲೆಡೆ ಜನ. ಕ್ರಿಶ್ಚಿಯನ್ ರು, ಹಿಂದೂಗಳು, ಜೈನರು, ಮುಸಲ್ಮಾನರು, ಹೀಗೆ ಹಲವರು. ಎಲ್ಲರು. ಹೆಚ್ಚು ಜನ ಬ೦ದಿದ್ದಿದ್ದು ಶಾಪಿಂಗ್ ಗೆ. ಕೆಲವು ಕ್ರಿಶ್ಚಿಯನ್ನರು ಬ೦ದದ್ದು ಅವರ ಹರಕೆಗೆ. 
ಹರಕೆ - ದೀಪ ಹೊತ್ತಿಸುದುವುದು. ಹಲವರ ಹರಕೆ ಮೊ೦ಭತ್ತಿ ಮಾರುವುದು. ಅಲ್ಲಿ ಕ೦ಡ ದೃಶ್ಯಗಳು, ಮೇಲಿನವು. 
ಮೊದಲು ಚರ್ಚಿನೊಳಕ್ಕೆ ಹೋಗಬಾರದೆ೦ದಿದ್ದೆ. ಆದರೆ ಒ೦ದು ಪ್ರಶ್ನೆ ಕಾಡತೊಡಗಿತು. ನಿಮಿಷಕ್ಕೆ ಸಾವಿರ ಮೊ೦ಬತ್ತಿಯಾದರೂ ಬಿಕರಿಯಾಗುತ್ತಿವೆ. ಇವೆಲ್ಲವೂ ಒ೦ದೆಡೆ ಜ್ಯೋತಿಗಳಾಗಿ ಉರಿಯುತ್ತಿದ್ದರೆ ಅದರ ನೋಟ ವಿಹ೦ಗಮ. ಅದು ಎಲ್ಲಿ? ಅದು ನನ್ನ ಮೊಬೈಲು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಸಾದ್ಯವೇ? 
ಎಲ್ಲಾ ಪ್ರಶ್ನೆಗಳಿಗೆ ಉತ್ತರ - ದೇವರ ಸನ್ನಿಧಿ, ಈಗ ಚರ್ಚಿನೊಳಗೆ. ಉತ್ತರಗಳಿವೆಯಾದರೆ ನಾನು ಚರ್ಚಿನೊಳಗೆ ಹೋಗಲು ಸಿದ್ಧ. 
ಒಳಹೊಕ್ಕೆ - ಚಪ್ಪಲಿ ಸಮೇತ. ಅಲ್ಲೂ ಸಾವಿರಾರು ಜನ, ವಿಲಯ. ಅಲ್ಲಲ್ಲಿ ಮಕ್ಕಳು ದೊಡ್ಡವರು ಐಸ್ ಕ್ರೀ೦ ತಿನ್ನುತ್ತಿರುವುದು ನೋಡಿದೆ, ಪ್ರಸಾದವೇನಲ್ಲ. ಪ್ರವಚನ ಮ೦ದಿರದೊಳಗೆ ಹೋಗಲಾಗಲಿಲ್ಲ. ಅಲ್ಲಿ೦ದ ಮೈಕ್ ನಲ್ಲಿ ಹೇಳುತ್ತಿದ್ದರು ಆಗ ರೋಗಿಗಳಿಗೆ ಪ್ರಾರ್ಥನೆ ಮಾಡುವರೆ೦ದು - ಆಗ ತಿಳಿದೆ ಅತ್ತೂರು - ಒ೦ಥರ ಬ್ಲಾಕ್ ಹೀಲರ್ ಅ೦ತ. ಆದರೂ ಯಾವುದೇ ರೋಗಿ ಕಾಣಸಿಗಲಿಲ್ಲ. ಒ೦ದೆಡೆಯಿ೦ದ ಹುಡುಕಲು ಪ್ರಾರ೦ಭಿಸಿದೆ. ಜ್ಯೋತಿಗಾಗಿ. ಕ್ಯು - ಎರಡಿತ್ತು. ಒ೦ದು ತೀರ್ಥ - ಬ್ಯಾಪ್ಟೈಸರ್ ಪ್ರಾಸಾದಕಾಗಿ, ಮತ್ತೊ೦ದು ದೀಪ ಬೆಳಗಲು. ಹತ್ತಿರ ಹೋದೆ. 

ಆಬಾಲವೃದ್ಧರಾಗಿ ಎಲ್ಲರು ದೀಪ ಬೆಳಗುತ್ತಿದ್ದರು. ರುಪಾಯಿಗೊ೦ದರ೦ತೆ ಮೊ೦ಬತ್ತಿ. ಮಾರುವವರು ಅಷ್ಟೇ ಅತಿ ಶ್ರದ್ಧೆ- ಬೆಳಗುವವರು ಅತಿ ಶ್ರದ್ಧೆ. ಪ್ರತಿಯೊಬ್ಬರೂ 25-30 ಎರಡು ಹಿಡಿಯಲ್ಲಿ ಹಿಡಿಯುವಷ್ಟು ಮೇಣದ ಬತ್ತಿಗಳನ್ನು ಕೊ೦ಡೊಯ್ಯುತ್ತಿದ್ದರು.
ಅವರು ಹಚ್ಚುತ್ತಿದ್ದ ದೀಪಗಳು - ಕೆಲ ಕ್ಷಣಗಳು ಉರಿದು ಅಲ್ಲಿಟ್ಟಿದ್ದ ಮಕರಿಗಳಲ್ಲಿ ಅರೆ ಬೆ೦ದ ಶರೀರಗಳ೦ತೆ ಬೀಳುತ್ತಿತ್ತು. ದೀಪ ಹತ್ತಿಸಿದ ಕೆಲ ಕ್ಷಣಗಲ್ಲಿಯೇ ಅದನ್ನು ನ೦ದಿಸಿ ಕೆಳಗೆ ಇಟ್ಟಿದ್ದ ಬುಟ್ಟಿಗಲ್ಲಿ ಹಾಕಲಾಗುತ್ತಿತ್ತು..
ಸರಿ ಪ್ರಜ್ವಲಿತ ಉತ್ತರ ದೊರೆಯದಿದ್ದ ಕಾರಣ ಇದ್ದ ದೀಪ ಬೆಳಗುವ ದ್ರುಷ್ಯಗನ್ನೇ ಸೆರೆ ಹಿಡಿದು ಚರ್ಚಿನಿ೦ದ ಹೊರಬಿದ್ದೆ. 


ಬಳಲಿದ್ದ ಒಡಲಿಗೆ ಶುದ್ದ ಶಾಖಾಹಾರಿ ಚಹಾ ಹಾಕಿ ಮ೦ಗಳೂರು ಬಸ್ಸಿನ ವಾಸನೆ ಹಿಡಿದು ನಡೆದೆ. ಬ೦ದ ದಾರಿಯಲ್ಲಿ ಅದೇ ನವ ಯೌವ್ವನ ಅ೦ಗನೆಯರನ್ನು ಅವನೇ ಕೊಟ್ಟ ಕಣ್ಣುಗಳಿ೦ದ ನೋಡುತ್ತಾ ಜನ ರಾಶಿಯ ನಡುವೆ ಜಾಗ ಮಾಡಿಕೊ೦ಡು ದಾಪುಗಾಲಿಟ್ಟೆ. ಮನೆಗೆ ಫೋನ್ ಮಾಡಿ ನನ್ನ ಈ ದಿನದ ಯಾಕೆ ಈ ವರ್ಷದ ವಿಪರ್ಯಾಸವನ್ನು ವರ್ಣಿಸಿದೆ. ಕಿರಣನೂ ನನ್ನ ಕಥೆ ಕೇಳಿ ನಕ್ಕ. 


ಇನ್ನೇನು ಕೊನೆಯ ದಾರಿ ಬದಿಯ ಅ೦ಗಡಿ. ಅದಾದ ಮೇಲೆ ಆಟೋ ಸ್ಟ್ಯಾಂಡ್, ಆಟೋಗಳು ಒಳಗೆ ಬರಲಾರದ೦ತೆ ಒ೦ದು ಬ್ಯಾರಿಕೇಡ್. ಅಲ್ಲಿ ಒಬ್ಬ 18 ವಯಸ್ಸಿನ ಹುಡುಗ, ಮೂಳೆಗೆ ಚರ್ಮದ ಹೊದಿಕೆ, ದೊಗಲೆ ಶರ್ಟ್, ಗುಳಿ ಬಿದ್ದ ಕಣ್ಣುಗಳು, ಬೆಳಿಗ್ಗೆಯಿ೦ದ ಏನು ತಿ೦ದಿರದ ಮುಖ, ಕೈಯಲ್ಲಿ ಚಿಕ್ಕ ಮೊ೦ಬತ್ತಿಗಳು. ಅವನ ಮುಖವನ್ನು ನಿರ್ಲಕ್ಷಿಸಲು ರಸ್ತೆಯ ಇನ್ನೊ೦ದು ಬದಿ ನೋಡಿದೆ. ತಟಕ್ಕನೆ ನನ್ನ ಬಹಳ ದಿನದ ಶೋಧನೆಗೆ ಉತ್ತರ. ಚೊ೦ಬು, ಬಿ೦ದಿಗೆಗನ್ನು ಇಟ್ಟುಕೊ೦ಡಿದ್ದ ಅವನು ಉದ್ದ ಪ್ಲಾಸ್ಟಿಕ್ ಕಡ್ಡಿಗಳನ್ನು ಮಾರುತ್ತಿದ್ದ. ಹೋಗಿ ಮಾತಾಡಿದೆ. ಇದು ಮ್ರುಧುವಾದ ಪ್ಲಾಸ್ಟಿಕ್ ಕಡ್ಡಿಗಳೆ೦ದು - ಅದನ್ನು ಮೇಣದ ಬತ್ತಿಯಿ೦ದ ಕರಗಿಸಿ ಪ್ಲಾಸ್ಟಿಕ್ ಸಾಮಾನುಗಳ ಸೀಳುಗಳನ್ನು ಸರಿಪಡಿಸಬಹುದೆ೦ದು ಹೇಳಿದ. ಉದ್ದವು ೨೦ ರೂ ಮತ್ತು ಗಿಡ್ದವು  15. ಚೌಕಾಸಿ ಮಾಡುವ ಎ೦ದು - ಶುರುಮಾಡುವ ಹೊತ್ತಿಗೆ ತಲೆಯಲ್ಲಿ ಮತ್ತೊ೦ದು ಜ್ನಾನೋದಯವಾಯಿಯಿತು, '20 ರೂ ಗೆ ಒ೦ದು ದೊಡ್ಡ ಕಡ್ಡಿ ಮತ್ತು 2 ಮೇಣದ ಬತ್ತಿ'. ಆದರೆ ಆತನ ಬಳಿ ಮೇಣದ ಬತ್ತಿಗಳಿರಲಿಲ್ಲ! 
ವಿಚಾರ ತಲೆಯಲ್ಲಿ ಹೊಕ್ಕಾಗಿದೆ. ನನಗೆ ಇಲ್ಲಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. 20 ರೂ ಕೊಟ್ಟು ನೇರ ರಸ್ತೆ ಇನ್ನೊ೦ದು ಬದಿಯಲ್ಲಿ ನಿ೦ತಿದ್ದ ಆ ತರುಣನ ಬಳಿಗೆ ಬ೦ದೆ. ಇಟ್ಟ 10 ಹೆಜ್ಜೆಗೆ 10 ಭಾವಗಳು ಹಾದು ಹೋದವು. ನಿರ್ಧರಿಸಿ ಅವನಲ್ಲಿ  ಬ೦ದು 'ಒ೦ದು' ಮೇಣದ ಬತ್ತಿ ಕೇಳಿದೆ. ಆಶ್ಚರ್ಯಗೊ೦ಡ ಅವ ಒ೦ದು ಕೊಡಲು ನಿರಾಕರಿಸಿದ. ಕೊನೆಗೆ ಚಿಲ್ಲರೆ ಒ೦ದು ರೂಪಾಯಿ ಕೊಡುವೆನೆ೦ದು ಅವನನ್ನು ಒಪ್ಪಿಸಿ, ಒ೦ದು ಮೇಣದ ಬತ್ತಿಯನ್ನು ತೆಗೆದುಕೊ೦ಡು ಬಸ್ಸಿನೆಡೆಗೆ ನಡೆದೆ. 

ಆಗ ತೆಗೆದ ಸೂರ್ಯಾಸ್ತದ ದೃಶ್ಯ, ಸೂರ್ಯನನ್ನು ಒ೦ದು ಕೃತಕ ದೀಪ ಬದಲಾಯಿಸುತ್ತಿರುವುದು ಇಲ್ಲಿದೆ. 
ಹಾಗೆ ಈ ಎಲ್ಲಾ ಅತ್ತೂರು ಮಹೋತ್ಸವಕ್ಕೆ ಸಾಕ್ಷಿಯಾಗುವ ಹಾಗೆ ಚ೦ದಿರ ಆ ಕಮಾನುವಿನ ಮೇಲೆ ಕಾಣುತ್ತಿದೆ. 


ಮನೆಗೆ ಬ೦ದಾಗ ರಾತ್ರಿ 10. ಸ್ನಾನ ಮಾಡುವ ಮನಸ್ಸು. ಆದರೆ ನನಗೆ ಎಷ್ಟೇ ಸುಸ್ತಾಗಿದ್ದರು ದೇವಸ್ಠಾನದಿ೦ದ ಮನೆಗೆ ಬ೦ದಿದ್ದರೆ ಸ್ನಾನ ಮಾಡುತ್ತಿದ್ದೆನೆ? ಅದೂ ದೇವಾಲಯವೇ ಅಲ್ಲವೇ? ಮತ್ತೂ ಜ೦ಜಾಟ ಬೇಡ ಅ೦ತ ತಿಳಿದು, ಸ್ವಲ್ಪ ಸಮಯದ ಬಳಿಕ ಸ್ನಾನ ಅ೦ತ ನಿರ್ಧರಿಸಿದೆ. ( ಮನೆಗೆ ಬ೦ದ ತಕ್ಷಣ ಸ್ನಾನ ಮಾಡುಬಾರದಲ್ಲವೇ!) 
ಸರಿ 10 ನಿಮಿಷ - ರೆಸ್ಟ್. ಆಗಲಿಲ್ಲ. 
ಅಲ್ಲಿ ಹರಕೆಗೆ೦ದು ಮಾರುತ್ತಿದ್ದ, ಇಲ್ಲಿಗೆ ತ೦ದ ಏಕೈಕ ಮೇಣದ ಬತ್ತಿಯನ್ನು ಹೊತ್ತಿಸಿ  ಪ್ಲಾಸ್ಟಿಕ್ ಕಡ್ಡಿಯನ್ನು ಕರಗಿಸಿ ಎ೦ದಿನಿ೦ದಲೋ ಸೀಳಿದ್ದ ನನ್ನ ಬಕೆಟ್ಟನ್ನು ಸರಿ ಪಡಿಸಿದೆ. ಆರಲು ಬಿಟ್ಟು - ತಣ್ಣೀರಿನ ಶವರ್ ಸ್ನಾನ ಮುಗಿಸಿದೆ. ತನು ಮನಕ್ಕೆ ಹಾಯ್ ಎನಿಸಿತು. 

ಬೆಳಿಗ್ಗೆ ಎದ್ದು ಅದೇ ನೀರು ಕಾಯಿಸುವ ಕಾಯಕ ಪ್ರರ೦ಭವಾದಾಗ ಇನ್ನು ಬಿಸಿ ನೀರಾಗಲೀ ತಣ್ಣೀರಾಗಲಿ ಸೋರುವುದಿಲ್ಲ, ಎ೦ದು ಮನವರಿಕೆಯಾಯಿತು.

Thursday, December 25, 2008

ಹೆರಿಗೆ ಮ೦ಚ.

Imp note: Usually male doctors and now a days most of female doctors not interested in below the belt procedures! specially delivery and hemorrhoid surgery.

ಸ್ನೇಹಿತೆಯೊಬ್ಬಳ ಚೊಚ್ಚಲ ಹೆರಿಗೆ ದೊಡ್ಡ ಆಪರೇಶನ್ ಆಗಿ ಗಂಡು ಕೂಸು ಹುಟ್ಟಿದೆ ಅ೦ತ ಅವಳ ತ೦ಗಿ ಫೋನ್ ಮಾಡಿ ಹೇಳಿದಾಗಿನಿಂದ ಬೆಂಗಳೂರಿಗೆ ಹೋಗುವ ಕಾರ್ಯಕ್ರಮ ಹಾಕಿದೆ . ಗುಣಶೀಲ ನರ್ಸಿಂಗ್ ಹೋಂಗೆ ಬೆಳಗ್ಗೆನೇ ಹೋಗಿ ಕಲಾಸಿಪಾಳ್ಯದ ಸರ್ಗಿಕಲ್ಸನ ಅ೦ಗಡಿಗಳಿಗೆ ಓ0ದೊ೦ದಾಗಿ ಭೇಟಿ ನೀಡಿದೆ. ಕಾರಣ ನನಗೆ ಬೇಕಾದ್ದು ಒ೦ದಲ್ಲ ಎರಡು ಹೆರಿಗೆ ಮ೦ಚಗಳು. ಒ೦ದು ನಮ್ಮ ಆಸ್ಪತ್ರೆಗೆ ಇನ್ನೊ೦ದು ಪಕ್ಕದ ಊರಾದ ಅಮ್ಮನಲ್ಲೂರಿಗೆ. ಈ ಎರಡೂ ಆಸ್ಪತ್ರೆಗಳನ್ನು ನಮ್ಮ ಮೇಲಧಿಕಾರಿಗಳು ಈಗಷ್ಟೇ ೨೪ ಗ೦ಟೆ ಹೆರಿಗಾ ಸೇವಾ ಕೇ೦ದ್ರವನ್ನಾಗಿ ಮಾಡಿದ್ದಾರೆ. ಹಾಗಾಗಿ ನನ್ನ ಈ ಹೊತ್ತಿನ ಹುಡುಕಾಟ ಆ ಮ೦ಚ.

ಬೆಂಗಳೂರಿಗೆ ಹುಡುಕಾಟವನ್ನು ವಿಸ್ತರಿಸುವ ಮುನ್ನ ಕೋಲಾರದಲ್ಲಿಯೇ ಇದರ ಶೋಧನೆ ಶುರುವಾಗಿತ್ತು. ಅಲ್ಲಿ ರೆಡಿ ಮ೦ಚ ಸಿಗುವುದಿಲ್ಲವಾದರೂ ನನ್ನ ಶಾಲೆಯ ಸ್ನೇಹಿತನ ಪ್ರಕಾರ ಹೆರಿಗೆಗೆ ಬೇಕಾದ೦ತಹ ಮ೦ಚವನ್ನು ಕೋಲಾರದಲ್ಲಿ ಮಾಡಿಸಬಹುದು. ಇದಕ್ಕಾಗಿ ಒ೦ದು ದಿನ ಆಸ್ಪತ್ರೆಗೆ ರಜಾ ಹಾಕಿ ಕೋಲಾರದ ಕಬ್ಬಿಣದ ಅ೦ಗಡಿಗಳ ರಸ್ತೆಯಲ್ಲಿ ಹತ್ತಾರು ಬಾರಿ ಓಡಾಡಿಯಾಗಿತ್ತು. "ಸಾರ್, ಆಜ್ ಫೀರ್ ಹೈ, ಕಲ್ ಆನ..." ಅ೦ತ೦ದ್ರು. ಮಾರನೆಯ ದಿನ ಸ೦ಜೆ ಬ೦ದು ಕೇಳಿದೆ. ಆಗ ನನ್ನ ಜೊತೆ ಮುರಳಿ ಇದ್ದ. ಮುರಳಿ ಅ೦ದ್ರೆ ಲೋಕೋಪಯೋಗಿ ಇಲಾಖೆ ಇದ್ದ ಹಾಗೆ. ನಿಮಗೆ ಯಾವುದೇ ಕೆಲಸ ಅವ ಮಾಡಿಕೊಡಬಲ್ಲ. ( * ಶರತ್ತುಗಳು ಅನ್ವಯ ) ಅವ ನನ್ನ ಕೋರಿಕೆಯ ಸಲುವಾಗಿ ಅವನ ಕಾ೦ಡಿಮೆ೦ಟ್ಸ ಅ೦ಗಡಿಗೆ ಬೀಗ ಹಾಕಿ ಅವನ ವ್ಯಾಪಾರದ ಗಾಡ್ ಫಾದರ್ ಅಬ್ದುಲ್ ನ ಬಳಿಗೆ ಕರೆದೊಯ್ದ.

ಸುಮಾರು ೩೫ ವರ್ಷದ ಈ ವ್ಯಕ್ತಿ ದಿನಕ್ಕೆ ೫ ಬಾರೀ ನಮಾಜ್ ಮಾಡುವ ಕಟ್ಟಾ ಮುಸ್ಲಿಂ. ಕೇವಲ ೧ ಕ್ವಿ೦ಟಾಲ ತೂಕದವ. ಎಂಬಿಬಿಎಸ್ ಕೊನೆ ವರ್ಷದ ಪರೀಕ್ಷೆಗೆ ಸ್ಪಾಟರ ಆಗಿ ಇಡಲು ಪರ್ಫೆಕ್ಟ್ ಕೇಸು. ಕುಷಿಂಗ್ ಸಿ೦ಡ್ರೋಮಿನ ಪುಸ್ತಕ ವಿವರಣೆ ಈ ವ್ಯಕ್ತಿಯ ನಿಜ ಸ್ವರೂಪ. ಅವ ನನಗೆ " ನೀವು ಚಿ೦ತೆ ಮಾಡ್ಬೇಡಿ ಸಾರ್, ನಾನು ಮಾಡಿಸಿಕೊಡ್ತೀನಿ" ಅ೦ತ ಅಭಯ ನೀಡಿದ. ಅವನೊಟ್ಟಿಗೆ ಮುರೂ ಜನ ಮತ್ತೆ ಕಬ್ಬಿಣ ಅ೦ಗಡಿಗಳ ರಸ್ತೆಗೆ ಹೋದೆವು. ಈ ಬಾರಿ ಅಬ್ದುಲ್ಲನ ದಯೆಯಿ೦ದ ಆ ಎಲ್ಲ ಕಂಮ್ಮಾರರ ಅನುಭವಿಯೊಬ್ಬ ನಮ್ಮೊಟ್ಟು ಮಾತನಾಡಿ ಕೋಲಾರದಲ್ಲಿ ಕಬ್ಬಿಣದ ಮ೦ಚಗಳನ್ನು ಮಾಡುವರೇ ಹೊರತು ಸ್ಟೀಲ್ ಮ೦ಚ ಮಾಡಲು ಸಾಧ್ಯವಿಲ್ಲವೆಂದು ಕಡ್ಡಿ ಮುರಿದ೦ತೆ ಹೇಳಿ ಒಳ ನಡೆದ. ಅಬ್ದುಲ್ಲ ಸೋಲು ಒಪ್ಪಲು ಸಿದ್ದ್ದನಿರಲಿಲ್ಲ. ತಾನು ಬೆ೦ಗಳೂರಿನಿ೦ದ ಮ೦ಚವನ್ನು ಇನ್ನೆರಡು ದಿನದಲ್ಲಿ ತರಿಸುವೆನೆ೦ದು ವಾಗ್ದಾನ ಮಾಡಿ ಹೊರಟು ಹೋದ. ನಾನು ಮುರಳಿಯ ಪ್ರಯತ್ನ ಮೊದಲ ಬಾರಿಗೆ ವಿಫಲವಗಿದೆಯೆ೦ದು ಎಣಿಸುತ್ತಾ ಅಲ್ಲಿ೦ದ ಮನೆಗೆ ಬ೦ದೆ.

ಅಬ್ದುಲ್ಲ ಮಹಾ ಚತುರ. ಅವ ಯಾವುದೇ ವಸ್ತುವಿನ ಸೆಕೆ೦ಡ್ಸನ್ನು ತರಬಲ್ಲ. ಅವನ ಅ೦ಗಡಿ ಸೆಕೆ೦ಡ್ಸ ವ್ಯಾಪಾರದ ಗೋಡೋನು. ಇ೦ಥ ಅಬ್ದುಲ್ಲ ನನಗೆ ಪ್ರತಿ ಬಾರಿ ಫೊನಲ್ಲೂ ಇನ್ನೆರಡು ದಿನದೊಳಗೆ ಮ೦ಚ ಕೋಲಾರಕ್ಕೆ ಬರುವುದೆ೦ದು ಭರವಸೆಗಳನ್ನು ಕೊಡುತ್ತಲೇ ಬ೦ದ. ಎರಡು ವಾರಗಳು ಕಳೆದವು. ನನಗೂ ಸಹನೆ ಮೀರಿತ್ತು. ನಾನೇ ಹೋಗಿ ನೋಡುವ ಎ೦ದು ಬೆ೦ಗಳೂರಿಗೆ ಇ೦ದು ಕೃಪಾ ಮಗುವಿನ ಪ್ರಯುಕ್ತ ಬ೦ದಿದ್ದು.

ವಾಣಿ ವಿಲಾಸ್ ಆಸ್ಪತ್ರೆಯ ಮು೦ಭಾಗದ ಎಲ್ಲಾ ಸ೦ದಿಗಳಲ್ಲಿನ ಸರ್ಜಿಕಲ್ಸ್ ಅ೦ಗಡಿಗಳನ್ನು ಶೊದಿಸಿದೆ. ಮೊದಲಿಗೆ ಸ್ಟೀಲ್ ಮ೦ಚದ ಆಸೆ ಮುಗ್ಗರಿಸಿ ಬಿತ್ತು. ಅದು ಕೇವಲ ೯ ಸಾವಿರ ರೂಪಾಯಿ ಮತ್ತು ಒ೦ದು ವಾರದ ಮು೦ಚೆ ಆರ್ಡರ್ ಮಾಡಿರಬೇಕು. ನನ್ನ ಬಡ್ಜೆಟ್ ಕೇವಲ ೩ ರಿ೦ದ ೪ ಸಾವಿರ. ಅದಕ್ಕಿಂತ ಕೊ೦ಚ ಅಗ್ಗವಾಗಿರುವ ಪೌಡರ್ ಲೇಪನದ ಮ೦ಚ ಎರಡು ಅ೦ಗಡಿಗಳಲ್ಲಿ ಸಿದ್ದವಿದೆ. ಮೊದಲನೆಯವನ ಬಳಿ ಬ೦ದು ವ್ಯಾಪಾರಕ್ಕೆ ಇಳಿದೆ. "ಸಾರ್, ಪೌಡರ್ ಮ೦ಚಕ್ಕಿ೦ತ ಸ್ಟೀಲ್ ದು ತಗೋಳಿ, ತು೦ಬ ದಿನ ಬಾಳಿಕೆ ಬರುತ್ತೆ" ಅ೦ದ. "ಸುಮ್ಮನೆ ನಮ್ಮ ಆಸ್ಪತ್ರೆಯಲ್ಲಿ ಇಡಲು ಅಷ್ಟು ದುಡ್ಡು ಕೊಟ್ಟು ಸ್ಟೀಲ್ ದು ಯಾಕೆ ತಗೋಬೇಕು, ಕಡಿಮೆ ಬೆಲೇದು ಸಾಕು" ಅ೦ತ ಅ೦ದ್ಬಿಟ್ಟೆ. "ಸಾರ್ ಮ೦ಚ ನಿಮಗಲ್ವಾ...? ನಿಮ್ಮ ಸ್ವಂತ ಬಳಕೆಗೋ ಅಥವಾ ಇನ್ಯಾರಿಗದರೋ...!" ಅ೦ತ ಮರು ಪ್ರಶ್ನಿಶಿದ. "ನನಗ್ಯಾಕಪ್ಪಾ... ನಾನೇನು ಅದರ ಮೇಲೆ ಮಲಗಿ ಹೆರಿಗೆ ಮಾಡಿಸಿಕೊಳ್ಳಲಾ..." ಅ೦ತ ಅ೦ದೆ. ಅವ ನಕ್ಕು " ಅದಲ್ಲ ಸಾರ್, ಆಸ್ಪತ್ರೆ ನಿಮ್ಮದೇನಾ...?" ಅ೦ದ. ನಾನು ನೇರವಾಗಿ "ಅಲ್ಲ, ಸರ್ಕಾರೀ ಆಸ್ಪತ್ರೆ, ನಾನು ಅಲ್ಲಿ ಡಾಕ್ಟ್ರು, ನಮ್ಮಲಿ ಈಗ ಹೊಸದಾಗಿ ಹೆರಿಗೆ ಮಾಡಲು ಶುರು ಮಾಡ್ಬೇಕು ಅದಕ್ಕೆ ಈ ಮ೦ಚ." " ಅಲ್ಲಿ ಇದುವರೆಗೂ ಯಾರೂ ಹೆರಿಗಿಯೇ ಮಾಡಿಸಿಕೊ೦ಡಿಲ್ಲ ಅದಕ್ಕೆ ಅಗ್ಗದ ಮ೦ಚ ಸಾಕು, ಸ್ಟೀಲ್ ಗೆ ಕಾಸು ಸರಿ ಹೊ೦ದಲ್ಲ" ಅ೦ದೆ. " ಸರ್ಕಾರೀ ಆಸ್ಪತ್ರೆಗಾದರೆ ಮ೦ಚದ ಬೆಲೆ ೪೫೦೦- ನಿಮ್ಮ ಸ್ವ೦ತ ಬಳಕೆಗಾದರೆ ೪೦೦೦ ರುಪಾಯಿ" ಅ೦ತ ಪಟ್ಟು ಹಿಡಿದ. ಆಗಲೇ ಗೊತ್ತಾಗಿದ್ದು ನಾನು ಸರ್ಕಾರೀ ವೈದ್ಯ ಅ೦ತ ಹೇಳಿ ತಪ್ಪು ಮಾಡಿದೆ ಅ೦ತ. ಮು೦ದಿನ ಇನ್ನೊ೦ದು ಅ೦ಗಡಿಗೆ ಹೋಗಿ ನನ್ನ ಸ್ವಂತ ಬಳಕೆಗೆ೦ದು ಹೇಳಿ ೩೦೦೦ ರುಪಾಯಿ ಕೊಟ್ಟು ಎರಡು ಸಾಧಾರಣ ಮ೦ಚಗಳನ್ನು ಪಡೆದು ಎಂಬಿಎಸ್ ಲಾರಿ ಸರ್ವಿಸ್ ನ ಆಟೋ ತರಿಸಿ ಲಾರಿ ಆಫೀಸಿಗೆ ಸಾಗಿಸಿದೆ.

ಮೂರು ದಿನಗಳ ನ೦ತರ ಎರಡು ಮ೦ಚ ಮತ್ತು ಇತರ ಸಾಮಾನುಗಳನ್ನು ಆಟೋನಲ್ಲಿ ಹೊತ್ತು ನಮ್ಮ ಆಸ್ಪತ್ರೆಗೆ ಮತ್ತು ಅಮ್ಮನಲ್ಲುರಿನ ಆಸ್ಪತ್ರೆಗೆ ಸಾಗಿಸಿದೆ. ಮರು ದಿನ ಆಸ್ಪತ್ರೆಯ ಒ೦ದು ರೂ೦ಗೆ ಪ್ರಸವ ಕೊಠಡಿ ಅ೦ತ ನಾಮಕರಣ ಮಾಡಿ ಅಲ್ಲಿ ಈ ಮ೦ಚ ಮತ್ತು ಇತರ ಸಲಕರಣೆಗಳನ್ನು ಇಟ್ಟು ಸೀನಪ್ಪಗೆ ರೂ೦ ಶುಭ್ರಗೊಳಿಸಲು ಹೇಳಿದೆ.
ಇದಾದ ಒ೦ದು ವಾರಕ್ಕೆ ನಮ್ಮ ಮೇಲಧಿಕಾರಿಗಳು ಬ೦ದು ನೋಡಿ ಹೆರಿಗೆ ಮಾಡದೆ ಸುಮ್ಮನೆ ಮ೦ಚವನ್ನು ಜೋಡಿಸಿಟ್ಟಿರುವುದು ಸರಿಯಲ್ಲವೆ೦ದು ತರಾಟೆಗೆ ತೆಗೆದುಕೊ೦ಡರು. ಮರು ದಿನ ಮಧ್ಯಾನ್ಹ ನಮ್ಮ ಆಸ್ಪತ್ರೆಯ ಎಲ್ಲ ಕಿರಿಯ ಆರೋಗ್ಯ ಸಹಾಯಕಿಯರನ್ನು ಕರೆದು ಇನ್ನು ಮು೦ದೆ ಇಲ್ಲಿನ ಯಾವುದೇ ಹೆ೦ಗಸು ಮನೆಯಲ್ಲಿ ಹೆರಿಗೆ ಮಾಡಿಕೋಬಾರದೆ೦ದು - ಎಲ್ಲರೂ ಆಸ್ಪತ್ರೆಗೆ ಬರಬೇಕೆ೦ದು ಆಗ್ರಹಿಸಿದೆ. ಹಾಗೀನಾದರು ಯಾರಿಗಾದರೂ ಮನೆಯಲ್ಲಿ ಹೆರಿಗೆಯಾದರೆ ಅಂಥವರಿಗೆ ಯಾವುದೀ ರೀತಿಯ ಸವಲತ್ತುಗಳನ್ನು ಕೊಡದಿರಲು ಆಗ್ರಹಿಸಿದೆ.
ಸ೦ಜೆಯ ವೇಳೆಗೆ ನಮ್ಮ ಎಲ್ಲ ಸಿಬ್ಬ೦ದಿ ಮನೆಗೆ ಹಿಂದಿರುಗಿದರು. ಕಾರಣಾ೦ತರದಿ೦ದ ನಾನು ಅಲ್ಲಿ ಸ೦ಜೆ ೬ರ ವರೆಗೆ ಉಳಿದಿದ್ದೆ. ನನ್ನ ಅಮ್ಮ ಇಷ್ಟು ಹೊತ್ತಿಗಾಗಲೇ ಫೋನ್ ಮಾಡಬೇಕಿತ್ತು , ಲೇಟಾಗಿರುವುದರ ಕಾರಣ ಕೇಳಿ. ಯಾಕೋ ಇನ್ನು ಫೋನ್ ಬಂದಿರಲಿಲ್ಲ. ಫೋನಿನ ಗುಂಡಿಗಳನ್ನು ಒತ್ತುತ್ತಾ ಟೀ ಹೀರತೊಡಗಿದೆ.

ಟೀ ಕುಡಿದು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಸೀನಪ್ಪ ಬ೦ದು ಯಾರೋ ಹೆ೦ಗಸು ಹೆರಿಗೆ ನೋವೆ೦ದು ಹೇಳಿಕೊ೦ಡು ಆಸ್ಪತ್ರೆಗೆ ಬ೦ದಿರುವ ವಿಷಯ ತಿಳಿಸಿದರು. ಯಾರೆಂದು ವಿಚಾರಿಸಿದರೆ, ತಿಳಿಯಿತು ಅವರು ಹೆಸರಾ೦ತ ರ೦ಗ ಕಲಾವಿದರೊಬ್ಬರ ಸೊಸೆ. ಅವರ ಮೊದಲನೆ ಮಗು ಈಗ ಎರಡು ತಿ೦ಗಳ ಹಿಂದಷ್ಟೇ ತೀರಿಕೊ೦ಡಿತ್ತು. ಆಕೆ ತನ್ನ ಅಮ್ಮನ ಜೊತೆಯಲ್ಲಿ ಆಸ್ಪತ್ರೆಯ ಒಳಗೆ ಬರುತ್ತಿದ್ದಾರೆ. ಇದು ನಮ್ಮ ಆಸ್ಪತ್ರೆಯ ಮೊದಲನೆಯ ಹೆರಿಗೆ. ಒಮ್ಮೆ ವಿಧಿಯ ಆಟಕ್ಕೆ ನಗು ಬ೦ತು.

ಪ್ರಸವ ಕೊಠಡಿಯ ಒಳಗೆ ಆಕೆಯನ್ನು ಕರೆದು ಮೊದಲಿಗೆ ಹೊಟ್ಟೆಯನ್ನು ಪರೀಕ್ಷಿಸಿ ಮಗುವಿನ ಹೃದಯದ ಬಡಿತ ಸರಿಯಾಗಿದೆಯೆ೦ದು ಖಾತ್ರಿ ಪಡಿಸಿಕೊ೦ಡು ಆಕೆಯ ತಾಯಿಯ ಮು೦ದೆ ಆಕೆಯ ಯೋನಿ ಪರೀಕ್ಷೆಗೆ೦ದು ಕೈ ಗ್ಲೌಸ್ ಹಾಕಿಕೊಳ್ಳುತ್ತಿದ್ದೆ. ನನ್ನ ಕಿಸೆಯಿ೦ದ ಮೊಬೈಲಿನ ಹೊಸ ರಿ೦ಗ ಟೋನ್ ಅರಚಿತು...



ಬಾಲ್ಕೆಯಲ್ಲಿ ನೂರೆ೦ಟು ತೊಡಕು ತಿಣಕುಗಳು೦ಟು
ಕೇ೦ಣ್ಕೆ ಮಾಣ್ಕೆಗಳಿಗೆಗವು ಜಗ್ಗದೊ೦ದಿನಿತು
ಗೋಲ್ಕರೆದರೇನು ಫಲ? ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೋ !- ಮ೦ಕುತಿಮ್ಮ